ಪುಟ:ನಡೆದದ್ದೇ ದಾರಿ.pdf/೫೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೫೨೨ ನಡೆದದ್ದೇ ದಾರಿ

ವೀಣಾ ಅವರ ಕೃತಿಗಳ ಬಗ್ಗೆ ಕೆಲವು ಅಭಿಪ್ರಾಯಗಳು

ಒಂದು ಟಿಪ್ಪಣಿ :

ಆಧುನಿಕ ಕನ್ನಡ ಸಾಹಿತ್ಯದಲ್ಲಿ ಶ್ರೀಮತಿ ರಾಜಲಕ್ಷ್ಮಿ ಎನ್. ರಾವ್ ಅವರ ನಂತರ ಬಹುಶಃ ಪ್ರೊ. ವೀಣಾ ಅವರದೇ ನವ್ಯ ಸ್ತ್ರೀಧ್ವನಿಯೆನ್ನಬೇಕು. “ನೆನಪು.... ಬರಿ ನೆನಪು" ಕತೆ ಕರ್ನಾಟಕ ಕಾಲೇಜ ಮಿಸೆಲೆನಿಯಲ್ಲಿ ಫ್ರಾಯ್ಡನ ಮಾನಸಶಾಸ್ತ್ರದ ಸಮರ್ಥನೆಯೊಂದಿಗೆ ಪ್ರಸಿದ್ಧವಾದಾಗಲೇ (ಆಗಿನ್ನೂ ಇವರು ಬಿ. ಎ. ಕ್ಲಾಸಿನಲ್ಲಿದ್ದರು. ಅವರು ಹೊಸದೃಷ್ಟಿಯ ಒಳ್ಳೆಯ ಕತೆಗಾರ್ತಿಯಾಗುವ ಲಕ್ಷಣ ತೋರಿಸಿದ್ದರು. ಕತೆಯೇ ಮುಂದೆ "ಸಂಕ್ರಮಣ"ದಲ್ಲಿ, ನಂತರ ಕಸ್ತೂರಿಯಲ್ಲಿಯೂ ಪ್ರಕಟವಾಗಿ ಓದುಗರಲ್ಲಿ ಕುತೂಹಲವನ್ನೂ ಆಸ್ಥೆಯನ್ನೂ ನಿರ್ಮಾಣ ಮಾಡಿತು. ಈಗ ಆ ಕತೆಯ ಜೊತೆಗೆ ಅವರು ಇತ್ತೀಚೆಗೆ ಬರೆದ ನಾಲ್ಕು ಕತೆಗಳನ್ನು ಸೇರಿಸಿ ಅವರ ಒಂದು ಚಿಕ್ಕ ಸಂಕಲನವನ್ನು ಸಂಕ್ರಮಣ ಪ್ರಕಾಶನದವರು ಹೊರತರುತ್ತಿರುವದು ಸಂತೋಷದ ಸಂಗತಿ. "ಮುಳ್ಳುಗಳು" ಸಂಕಲನದ ಕತೆಗಳ ಬಗ್ಗೆ ಇವರು ಒಳ್ಳೆಯ ಕತೆ ಬರೆಯಬಲ್ಲರು, ಇವರ ಕತೆಗಳು ಚೆನ್ನಾಗಿವೆ ಎಂಬ ಪ್ರಾಥಮಿಕವಾದ ಮಾತುಗಳನ್ನು ಬಿಟ್ಟು ಮತ್ತೇನಾದರೂ ಹೇಳಲು ಸಾಧ್ಯವೇ ಎಂಬುದನ್ನು ನೋಡುವದೇ ನನ್ನ ಟಿಪ್ಪಣಿಯ ಉದ್ದೇಶವಾಗಿದೆ. ಪ್ರೊ. ವೀಣಾ ಅವರಿಗೆ ಪ್ರಾಮುಖ್ಯವಾಗಿ ಸ್ತ್ರೀ ಮನವನ್ನು, ಅದರಲ್ಲಿಯೂ ತರುಣ (ಇನ್ನೂ ಲಗ್ನವಾಗದ, ಇಷ್ಟರಲ್ಲಿಯೇ ಲಗ್ನವಾಗಲಿರುವ, ಅದೇ ಲಗ್ನವಾದ) ಸ್ತ್ರೀಯ ಮನವನ್ನು ಚಿತ್ರಿಸುವದರಲ್ಲಿ ಬಹಳ ಆಸಕ್ತಿ ಹಾಗೂ ಇಂಥ ಚಿತ್ರಣವನ್ನು ಅವರು ಸ್ವಲ್ಪ ದಿಟ್ಟತನದಿಂದ, ಆದಷ್ಟು ಪ್ರಾಮಾಣಿಕವಾಗಿ, ಸೂಕ್ಷ್ಮವಾಗಿ ಮಾಡಲು ಯತ್ನಿಸುತ್ತಾರೆ ಎಂದು ಮುಂತಾದ್ದಾಗಿ, ಇಲ್ಲಿಯ ಕತೆಗಳನ್ನು ಓದಿದ ಯಾರಿಗೂ ಅನಿಸುವ ಮಾತುಗಳನ್ನು, ಎತ್ತಿ ಹೇಳುವ ಅವಶ್ಯಕತೆ ಇದೆಯೆಂದು ನನಗನಿಸುವದಿಲ್ಲ. ಈ ಕತೆಗಳಲ್ಲಿ ವಿಮರ್ಶಕನ ಕುತೂಹಲವನ್ನೂ ಕಾಳಜಿಯನ್ನೂ ಕೆರಳಿಸುವ ವಿಷಯವೆಂದರೆ ಅವುಗಳಲ್ಲಿಯ ಕಥನಕಲೆಯ ಸ್ವರೂಪ ಮತ್ತು ಅಭಿವ್ಯಕ್ತಿಯ ರೀತಿ. ಪ್ರೊ. ವೀಣಾ ಅವರ ಕಥನಕಲೆಯ