ಪುಟ:ನಡೆದದ್ದೇ ದಾರಿ.pdf/೫೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಇನ್ನಷ್ಟು ಕತೆಗಳು | ವೀಣಾ ಅವರ ಕೃತಿಗಳ ಬಗ್ಗೆ ಕೆಲವು ಅಭಿಪ್ರಾಯಗಳು ೫೨೫

ಗಿಳಿಯನ್ನು ಸರಯೂ ಬಿಟ್ಟುಬಿಡುವ ಸನ್ನಿವೇಶ, ವೀಣೆಯ ತಂತಿ, ಆ ಹಾಡು -ಎಲ್ಲ ಬಹಳ ಪಾರದರ್ಶಕವಾದ ಸಂಕೇತಗಳಾಗಿ ಬರುವದೂ `ರೊಮ್ಯಾಂಟಿಕ್' ರೀತಿಯ ಕಲಾತ್ಮಕತೆಯನ್ನೇ ಸೂಚಿಸುತ್ತದೆ. ಈ ಕತೆ ಅತ್ಯಂತ ಇತ್ತೀಚಿನ ಕತೆ ಎಂಬ ಮಾತು ಪ್ರೊ. ವೀಣಾ ಅವರ ಪ್ರಾಯೋಗಿಕ ಅನಿರ್ದಿಷ್ಟ ಮನೋಭೂಮಿಕೆಯನ್ನೇ ಸಾರಿ ಹೇಳುವಂತಿದೆ. ಹಳೆ-ಹೊಸ, ಕಲ್ಪಕತೆ-ವಾಸ್ತವಿಕತೆ, ಸಂಕೀರ್ಣತೆಯ ಅರಿವು ಸುಲಭೀಕರಣ ಮಾಡಹಚ್ಚುವ ಕಲೆ. ಇವುಗಳ ಅನಿವಾರ್ಯವಾದ ಘರ್ಷಣೆ ಪ್ರೊ. ವೀಣಾ ಅವರ ಕತೆಗಳಲ್ಲಿಯೂ ಒಂದು ಅತ್ಯಂತ ಕುತೂಹಲಕಾರಿಯಾದ ಸಂಗತಿ. ಪ್ರೊ. ವೀಣಾ ಅವರು ಈ ಘರ್ಷಣೆಯನ್ನು ಪರಿಹರಿಸಬಹುದಾದ ರೀತಿಯ ಮೇಲೆ ಮುಂದಿನ ಬೆಳವಣಿಗೆ ಅವಲಂಬಿಸಿದೆ. ಪ್ರೊ. ವೀಣಾ ಅವರ ಕಲೆಗಾರಿಕೆಯಲ್ಲಿ ಬೆಳೆಯುವ ಸಾಮರ್ಥ್ಯ ಸಾಕಷ್ಟಿದೆ. ಈ ಕತೆಗಳಲ್ಲಿ ಒಂದು ಕೇಂದ್ರ ಪ್ರತಿಮೆಯ ಸುತ್ತ ಕತೆ ಹೆಣೆಯುವ ಕಲೆ ಇವರಿಗೆ ಚೆನ್ನಾಗಿ ಸಾಧಿಸಿದೆಯೆನ್ನಬಹುದು. ಆದರೆ ಇಂಥ ಕಲೆಗಾರಿಕೆಯತ್ತ ಲಕ್ಷ ಸ್ವಲ್ಪ ಹೆಚ್ಚಾದರೆ ಅನುಭವ ತರಲವಾಗುತ್ತದೆ. ತನ್ನ ನೈಜ ಸಾಂದ್ರತೆಯನ್ನು ಕಳೆದುಕೊಳ್ಳುತ್ತದೆ ಎಂಬ ಮಾತನ್ನು ಅವರು ಲಕ್ಷದಲ್ಲಿಡಬೇಕಾದದ್ದು ಅವಶ್ಯ. ಒಟ್ಟಿನ ಮೇಲೆ, ಅನುಭವವನ್ನು ಎದುರಿಸುವ ದಿಟ್ಟತನ, ಅದನ್ನು ತಮ್ಮದೇ ಆದ ರೀತಿಯಲ್ಲಿ ಎದುರಿಸಿ ಗೆಲ್ಲುವ ಹವ್ಯಾಸ, ತೀಕ್ಷ್ಯ ಕಲಾಪ್ರಜ್ಞೆ, ಭಾಷೆಯ ಮೇಲಿನ ಸಹಜ ಪ್ರಭುತ್ವ ಇವನ್ನೆಲ್ಲ ನೋಡಿದರೆ ಈ ಕತೆಗಾರ್ತಿಯ ಭವಿಷ್ಯ ಉಜ್ವಲವಾಗಿದೆಯೆಂದು ನಿಸ್ಸಂಕೋಚವಾಗಿ ಹೇಳಬಹುದು.

ಶಾಂತಿನಾಥ ದೇಸಾಯಿ

ನಿಜವಾಗಿಯೂ ಧೈರ್ಯದಿಂದ ಬರೆಯದಿದ್ದರೂ ಹಾಗೆ ಬರೆದಂತೆ ತೋರಿಸಿಕೊಂಡ ಶ್ರೀಮತಿ ತ್ರಿವೇಣಿಯವರ ಜನಪ್ರಿಯತೆ ಒಂದು ರೀತಿಯದು : ಶೈಲಿ, ತಂತ್ರ ಮತ್ತು ನೈತಿಕ ಮೌಲ್ಯಗಳ ದೃಷ್ಟಿಯಿಂದ ಹೊಸತೇನನ್ನೂ ಮಾಡಲಾಗದ ಅವರು ಸಂಪ್ರದಾಯ ಶರಣರಿಗೆ ತೀರ ಹೆಚ್ಚು ನೋವಾಗದ ರೀತಿಯಲ್ಲಿ, ಅಂಥವರು ಬೆಚ್ಚಿ ಬೀಳದ ರೀತಿಯಲ್ಲಿ ಕೆಲವು ಪ್ರಶ್ನೆಗಳನ್ನು ಕೇಳಿ ಅವರ ಮೆಚ್ಚುಗೆ ಗಳಿಸಿದರು. ಇವರ ದಾರಿಯಲ್ಲೇ ನಡೆದ ಇನ್ನೂ ಅನೇಕ ಲೇಖಕಿಯರು ಈ ಜನಪ್ರಿಯತೆಯ ತಂತ್ರವನ್ನು ತಮ್ಮದಾಗಿ ಮಾಡಿಕೊಂಡು ಯಶಸ್ವಿಯಾದರು. ಈ ರೀತಿಯ