ಪುಟ:ನಡೆದದ್ದೇ ದಾರಿ.pdf/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೪೮

ನಡೆದದ್ದೇ ದಾರಿ

ಅವಳು ಹೊಸಿಹೋದ ಸುಪ್ತಜ್ವಾಲೆಯನ್ನು ಈ ಉರಿ ಕೆರಳಿಸಿ ಭುಗಿಲ್ಲೆಂದು
ಬೆಂಕಿಯಾಗಿ, ಅದರಲ್ಲೇ ನೀನು ಸ್ವಲ್ಪ-ಸ್ವಲ್ಪವಾಗಿ ಸುಟ್ಟು-ಬೆಂದು ಹೋಗುವುದನ್ನು
ದೂರದಿಂದ ನೋಡುತ್ತಿರಬೇಕು; ನೋಡಿ ಸಮಾಧಾನ ಹೊಂದಬೇಕು.....
-ತನ್ನ ಆ ವಿಚಾರದ ಭಯಂಕರ ಕ್ಷುಲ್ಲಕ ನೀಚತನದ ಅರಿವು ಬಂದು ಶಶಿ
ಒಂದು ಕ್ಷಣ ನಡುಗಿದಳು. ಕೊನೆಯ ನಂಬರು ಪಡೆದೂ ಸಹ ಬರಿ 'ನೆನಪಾ'ಗಿ ಒಂದೆಡೆ
ಸುಮ್ಮನೆ ಬೀಳುವ ಬದಲು ಹೀಗೆ ರಾತ್ರಿ ತನ್ನನ್ನು ನಿದ್ರೆಗೆಡಿಸುವ, ಕಾಡಿಸುವ,
ಕೊಲ್ಲುವ NO.IVನ ಮೇಲೆ ಅವಳಿಗೆ ಸಿಟ್ಟು ಬಂದಿತು. ಇದೊಂದೇ ರಾತ್ರಿ, ಕೊನೆಯ
ಸಲ. ಇನ್ನೆಂದೂ ಮನಸ್ಸಿನಲ್ಲಿ ಇಂಥ ಅನರ್ಥಕಾರಿ ಪ್ರಶ್ನೆಗಳಿಗೆ ಆಸ್ಪದ ಕೊಡಬಾರದು.
....ಹೌದು, ನಾಳೆ ಪೂರಾ ಬೆಳಗಾದೊಡನೆ ಮನೆಗೆ ಪತ್ರ ಬರೆದುಬಿಡಬೇಕು.
-ಎಷ್ಟು ಪ್ರಯತ್ನಿಸಿದರೂ ತನ್ನ ಹಿಡಿತ ಮೀರಿ ಹೊರಬಂದು ರಾಕ್ಷಸಾಕಾರ
ತಾಳುತ್ತಿರುವುದು ಇನ್ನೊಂದು ಪ್ರಶ್ನೆ: NO.IVನ ಪ್ರಶ್ನೆಗೆ ಎಂದೂ ಉತ್ತರ
ಸಿಗುವುದಿಲ್ಲೆಂದು, ಅವನ ಪಾಲಿಗೆ ಅವಳು ಬರಿಯ ಕನಸಾಗಿಯೇ ಉಳಿಯುವಳೆಂದು,
ಆ ಪ್ರಶ್ನೆ-ಕನಸು ಸಹಿತವಾಗಿಯೇ ಒಂದು ದಿನ ಆತನ ಜೀವನದ
ಅಂತ್ಯವಾಗುವುದೆಂದು ತನಗೇಕೆ ಅನ್ನಿಸಬೇಕು? 'ನಿನ್ನ ಕನಸು ಕನಸಾಗಿಯೇ
ಉಳಿಯುವುದು. ಪ್ರಶ್ನೆ ಪ್ರಶ್ನೆಯಾಗಿಯೇ ಇರುವುದು' ಎಂದು ತಾನತನಿಗೆ
ಹೇಳಿದ್ದರಲ್ಲಿ ಅದು ಹಾಗೇ ಉಳಿಯಲಿ-ಇರಲಿ ಎಂಬ ಗುಪ್ತ ಬಯಕೆಯೊಂದಿತ್ತೆ?
ಅವನ ಕನಸೊಂದು ದಿನ ನನಸಾಗಿ ಅವನ ಪ್ರಶ್ನೆಗೊಮ್ಮೆ ಉತ್ತರ ಸಿಗಲೂ
ಬಹುದಲ್ಲವೆ? ಅದು ಸಾಧ್ಯವೇ ಇಲ್ಲವೆಂದು ತಾನು ನಂಬಿರುವುದರಲ್ಲಿ ಅದು
ಸಾಧ್ಯವಾಗಬಾರದೆಂಬ ಇಚ್ಚೆಯೂ ಇದೆಯೆ? ಇದೇನು ಅಸೂಯೆಯೇ ಆಜ್ನಾನವೇ?
ಇದೇ ಬಗೆಯ ಅನಿಸಿಕೆ NO.IVನಲ್ಲೂ ಇತ್ತೆಂಬುದು ಅನೇಕ ಸಲ ಆತನ ವರ್ತನೆಯಲ್ಲಿ
ಕಂಡಿದ್ದೂ ತಾನದನ್ನು ನಿರ್ಲಕ್ಷಿಸಿದ್ದೇಕೆ? ಅರುಣನ ಬಗ್ಗೆಯೊಮ್ಮೆ ಹೇಳಿದಾಗ,
'ಮದುವೆಯೊಂದು ನಿನ್ನ ಪ್ರಶ್ನೆಗೆ ರಾಮಬಾಣವೆಂದು ನೀನು ತಿಳಿದಿದ್ದರೆ ಅದು ತಪ್ಪು
ಶಶೀ, ಪ್ರಶ್ನೆ ಜೀವನದ ಸಂಗಾತಿ. ಅದರಿಂದ ನಿನಗೆ ಬಿಡುಗಡೆ ದೊರೆಯಲಾರದು'-
ಎಂದಿದ್ದನಲ್ಲವೆ ಆತ? ತನಗಾದಂತೆ ನನಗೂ ಮದುವೆಯಿಂದ ಬಾಳಿನಲ್ಲಿ
ಆತೃಪ್ತಿಯ, ಎದೆಗುದಿಯ, ಬಂಧನದಲ್ಲಿ ಸಿಲುಕಿದಂಥ ಚಡಪಡಿಕೆಯ
ಅನುಭವವಾಗುವುದೆಂದು ಆತ ತಿಳಿದಿರುವನೆ? ಹಾಗಾಗಲೆಂದು ಬಯಸಿರುವನೆ?
ಈ ಪ್ರಶ್ನೆಗೆ ಕೊನೆಯೆಲ್ಲಿ? ಇದನ್ನು ಇದರ ಪಾಲಿಗೇ ಬಿಡುವುದೊಳ್ಳೆಯದು.
-ಹೊದಿಕೆಯನ್ನು ಮುಖದ ತುಂಬ ಹೊದ್ದುಕೊಳ್ಳುತ್ತಿರುವಂತೆ ಶಶಿ
ಬೆಳಗಾದೊಡನೆ, ಮದುವೆಗೆ ಒಪ್ಪಿರುವೆನೆಂದು ಅಪ್ಪನಿಗೆ ಪತ್ರ ಬರೆಯುವ ನಿರ್ಧಾರ