ಪುಟ:ನವೋದಯ.pdf/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

430

ಸೇತುವೆ

"ಕನ್ನಡದಲ್ಲಿ."
"ನಾನು ಇಂಗ್ಲಿಷಿನಲ್ಲೋದಿದೆ. ಅದರಲ್ಲಿ ಜಾಸ್ತಿ ವಿವರ ಇತ್ತು."
ಜಯದೇವ ಸಹಜವಾದ ಕುತೂಹಲದಿಂದ ಕೇಳಿದ:
"ಏನಿತ್ತು?"
ಗೌಡರು, ಸಿಗಿದು ನುಂಗುವ ಕಣ್ಣುಗಳಿಂದ ನಂಜುಂಡಯ್ಯನವರನ್ನು
ನೋಡಿದರು.
“ಕರ್ನಾಟಕ ಪ್ರಾಂತ ರಚನೆಗೆ ಮೈಸೂರಿನ ಕೆಲವರ ವಿರೋಧ ಇದೆ ಅನ್ನೋ
ದನ್ನ ಆ ತ್ರಿಮೂರ್ತಿಗಳು ಪ್ರಸ್ತಾಪಿಸಿದ್ದಾರೆ."
"ಹೌದೆ?"
“ಹೂಂ. ಮೈಸೂರು ಲಿಂಗಾಯತರ ರಾಜ್ಯವಾದೀತೂಂತ ಆ ವಿರೋಧಿಗಳಿಗೆ
ಭಯ_ಅಂದಿದ್ದಾರೆ."
“ಓ!" ಎಂದ ಜಯದೇವ.
ಲಕ್ಕಪ್ಪಗೌಡರು ಸ್ವರವೇರಿಸಿ ನುಡಿದರು:
"ಹೌದು ಸ್ವಾಮೀ. ನನಗೂ ಇಂಗ್ಲಿಷು ಬರುತ್ತೆ. ನಾನೂ ಓದಿದೀನಿ. ಹೇಳಿ."
“ಆದರೆ, ಒಕ್ಕಲಿಗರಲ್ಲಿರೋ ಈ ಭಯ ಸರಿಯಲ್ಲ: ಹೊಸ ರಾಜ್ಯದಲ್ಲಿ
ಯಾವುದೇ ಜಾತಿಗೂ ಬಹುಮತವಿರೋದಿಲ್ಲ_ಅಂತ ಅವರು ಸ್ಪಷ್ಟಪಡಿಸಿದ್ದಾರೆ."
“ಅಂಕೆ ಸಂಖ್ಯೇನೂ ಒದಗಿಸಿದಾರೇಂತ ಹೇಳಿ!"
ನಂಜುಂಡಯ್ಯ ನೇರವಾಗಿ ಲಕ್ಕಪ್ಪಗೌಡರನ್ನೆ ಇದಿರಿಸಿ ಕೇಳಿದರು:
“ಯಾಕೆ? ಆ ವಿವರಣೇನ ನೀವು ಒಪ್ಪೋದಿಲ್ವೊ?"
"ಇಲ್ಲ ಸ್ವಾಮೀ. ತಾತ ಮುತ್ತಾತನ ಕಾಲದಿಂದ ಭದ್ರವಾಗಿರೋ ಮೈಸೂರು
ರಾಜ್ಯವನ್ನ ಕದಲಿಸೋದು ಯಾವನಿಂದಲೂ ಸಾಧ್ಯವಿಲ್ಲ!"
ಜಯದೇವನೆಂದ:
"ಪಾಳೆಯಗಾರ ಪದ್ಧತಿಯಿಂದ ಜನರಿಗೆ ಹಿತವಿಲ್ಲಾಂತ ಇತಿಹಾಸ ಹೇಳುತ್ತೆ.
ಸಮಾಜವಾದವೇ ನಮ್ಮ ಗುರೀಂತ ಒಪ್ಕೊಂಡ್ಮೇಲೆ__"
ಗೌಡರೆಂದರು:
"ಒಂದಕ್ಕಿನ್ನೊಂದು ಸೇರಿಸ್ಬೇಡಿ ಜಯದೇವರೆ. ಸಮಾಜವಾದವೇ ಬೇರೆ.
ಮೈಸೂರಿನ ಪ್ರಶ್ನೆಯೇ ಬೇರೆ. ಸಮಾಜವಾದ ಬೇಕೂಂತ ನೆಹರೂ ಹೇಳ್ಕೊಳ್ಲಿ.
ನಮಗೆ ಮಾತ್ರ ನಮ್ಮ ಮಹಾರಾಜರು ಬೇಕು."
"ನೆಹರೂ ಮಾತನ್ನ ಅಷ್ಟು ಹಗುರವಾಗಿ ಕಾಣೋದು ಸರಿಯಲ್ಲ ಅನಿಸುತ್ತೆ,"
ಎಂದ ಜಯದೇವ.
"ಹಗುರವೊ ಭಾರವೊ. ಈ ಕರ್ನಾಟಕ ರಾಜ್ಯಸ್ಥಾಪನೆ ಖಂಡಿತ ಆಗೋದಿಲ್ಲ."
ನಂಜುಂಡಯ್ಯ ನಕ್ಕರು.