ಪುಟ:ನವೋದಯ.pdf/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

439

ಜಯದೇವ ಒಬ್ಬಿಬ್ಬರೊಡನೆ ಮಾತನಾಡಿದ. ಹೊರಗಿನ ಅವರೆಲ್ಲ, ಉಚಿತ
ವಾಗಿ ಊಟಕೊಡಲಿಲ್ಲವೆಂದು ಸ್ವಾಗತಸಮಿತಿಯವರನ್ನು ಟೀಕಿಸಿದರು.
["ಬರೇ ತಿಂಡಿ-ಬಾಯುಪಚಾರದಲ್ಲೇ ಮುಗಿಸಿದಾರೆ."]
["ನಮ್ಮೂರಿಗೆ ಸಮ್ಮೇಳನ ಕರೆದಿದ್ದಾಗ ನಾವು ಎಷ್ಟು ಚೆನ್ನಾಗಿ ಏರ್ಪಾಟು
ಮಾಡಿದ್ವೀಂತ!"]
ಇದ್ದುದರಲ್ಲೆ ಒಳ್ಳೆಯ ಪೋಷಾಕು ಧರಿಸಲು, ಪರಸ್ಪರ ಪರಿಚಯ ಮಾಡಿ
ಕೊಳ್ಳಲು, ಆ ಸಮ್ಮೇಳನವೊಂದು ಸುಸಂದರ್ಭವಾಗಿತ್ತು, ಅಷ್ಟೆ.
ಜಯದೇವ ಸ್ವಾಗತ ಕಾರ್ಯದರ್ಶಿಯನ್ನು ಸಮೀಪಿಸಿ ಕೇಳಿದ:
"ವಿಷಯ ನಿಯಾಮಕ ಸಮಿತಿ ಯಾವಾಗ ಸೇರುತ್ತೆ?"
ಸರಿಯಾಗಿ ಉಸಿರಾಡುವುದಕ್ಕೂ ಅವರಿಗೆ ಬಿಡುವಿರಲಿಲ್ಲ.
“ತಡವಾಗ್ಹೋಯ್ತು ಕಣ್ರೀ. ಸಮಿತಿ ರಚಿಸೋಕೆ ಆಗುತ್ತೋ ಇಲ್ವೋ.
ವಿದ್ಯಾಧಿಕಾರಿಗಳಿಗೆ ಸಿಟ್ಟು ಬಂದ್ಬಿಟ್ಟಿದೆ. ಸಮ್ಮೇಳನ ಮುಗಿಸಿ ಸಾಯಂಕಾಲವೇ ಅವರು
ಹೊರಟ್ಹೋಗ್ಬೇಕಂತೆ."
ಸಹನೆಗೂ ಒಂದು ಮಿತಿ ಇದೆ ಎನಿಸಿತು ಜಯದೇವನಿಗೆ.
"ಹಾಗಾದರೆ ಸಮ್ಮೇಳನ ಕರೆದಿದ್ದಾದರೂ ಯಾಕೆ ಅಂತ?"
"ರೇಗ್ಬೇಡೀಪ್ಪ ಸದ್ಯಃ. ನೀವು ಮಾತಾಡ್ತಿರೇನು? ಪಟ್ಟೀಲಿ ಸೇರಿಸ್ತೀನಿ. ನಿಮ್ಮ
ಹೆಸರು ಹೇಳಿ."
"ಮಾತಾಡೋ ಛಾನ್ಸಿಗೋಸ್ಕರ ಅಲ್ಲ ಸಾರ್ ನಾನು ಬಂದಿರೋದು. ನಿರ್ಣಯ
ಬರಕೊಂಡು ತಂದಿದೀನಿ."
"ಏನಾದರೂ ಮಾಡೀಪ್ಪ. ನನ್ಕೈಲಾಗಲ್ಲ. ಸಾಹೇಬರು ರೇಗಾಡ್ತಿದಾರೆ,"
ಎನ್ನುತ್ತ ಆ ಮನುಷ್ಯ ಹೊರಟೇ ಹೋದರು.
ಮೂರು ಘಂಟೆಗೆ ಶಾಲಾ ಬಾಲಿಕೆಯರ ಪ್ರಾರ್ಥನೆಯೊಂದಿಗೆ ಸಮ್ಮೇಳನ
ಮೊದಲಾಯಿತು. ಅವರಿಗೋಸ್ಕರ ತಗ್ಗಿಸಿದ್ದ ಧ್ವನಿವರ್ಧಕವನ್ನು ಮತ್ತೆ ಏರಿಸಿದರು.
ಪುರ ಸಭಾಧ್ಯಕ್ಷರಿಂದ ಸ್ವಾಗತ ಭಾಷಣ. ಎಷ್ಟೋ ದಿನಗಳಿಂದ ಓದುತ್ತ ಕಂಠಪಾಠ
ಮಾಡಿದ್ದ ಭಾಷಣದ ಕರಡು ಪ್ರತಿ ಅವರ ಕೈಯಲ್ಲಿತ್ತು.
"ಸನ್ಮಾನ್ಯ ಶ್ರೀ ವಿದ್ಯಾಸಚಿವರೆ___"
ಭಾಷಣ ಬರೆದವರಿಗೆ ಆ ದಿನ ಅದನ್ನು ತಿದ್ದಲು ಮರೆತೇ ಹೋಗಿತ್ತು!
ಸಮ್ಮೇಳನದ ಸಭಿಕರ ಗು೦ಪಿನಿಂದ ಯಾರೋ ಒಬ್ಬರು ನಕ್ಕರು. ಆ ಸಾಹಸಿ
ಯಾರೆಂದು ನೋಡಲು ಉಳಿದವರೆಲ್ಲ ಅತ್ತ ದೃಷ್ಟಿ ತಿರುಗಿಸಿದರು. ಆದರೆ ಆ ವ್ಯಕ್ತಿ
ಅಷ್ಟರಲ್ಲೆ ತಲೆಕೆಳಹಾಕಿದ್ದುದರಿಂದ ಆತನ ಮುಖ ಕಾಣಿಸಲಿಲ್ಲ. ಕಪ್ಪು ಗಾಜಿನ ಕನ್ನಡಕ
ಧರಿಸಿದ್ದ ವಿದ್ಯಾಧಿಕಾರಿ ಮೇಜಿಗೆ ಬಡೆದು ಹೇಳಿದರು:
"ಸೈಲೆನ್ಸ್!"