ಪುಟ:ನವೋದಯ.pdf/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

490

ಸೇತುವೆ

"ಹಿತೈಷಿಗಳು ಈ ರೀತಿ ಮಾತಾಡೋದಿಲ್ಲ."
"ಆ ಇಂದಿರಾ ತಂಟೆಗೆ ನೀವು ಹೋಗ್ಬೇಡಿ. ಪರಿಣಾಮ ಚೆನ್ನಾಗಿರೋದಿಲ್ಲ."
ರಾಮಾಚಾರಿ, ಒಂದನ್ನೂ ತಿಳಿಯದಂತೆ ನೊಂದವನ ನಟನೆ ತೋರಿದ.
"ಯಾವ ಇಂದಿರಾ? ಏನು ಕಥೆ? ಮೊನ್ನೆ ದಿವಸ ಹಾಡಿದ ಹುಡಿಗೀನೇನ್ರಿ?
ನಾನು ಯಾಕ್ರಿ ಹೋಗ್ಲಿ ಅವಳ ತಂಟೆಗೆ?"
"ನೀವು ಬರೆದಿರೋ ಕಾಗದ ನಿಮ್ಮ ಮುಖದೆದುರು ಹಿಡೀಲೇನು?"
[ಕಾಗದವನ್ನೂ ಒಯ್ದು ಕೊಟ್ಟಿದ್ದಳು ಕುಲಟೆ!]
ನಿರಾಕರಣೆಯಿಂದ ಯಾವ ಪ್ರಯೋಜನವೂ ಇರಲಿಲ್ಲ.
"ಕಾಗದ ಬರೆದ ತಕ್ಷಣಕ್ಕೆ ಹೇಟೆ ಹುಂಜವಾಯ್ತೊ? ನಿಮಗ್ಯಾತಕ್ಕೆ ಈ
ಉಸಾಬರಿ?"
"ಹುಷಾರಿ! ಮಾನವಂತರ ಹುಡುಗೀನ ಬೀದಿಗೆಳೆಯೋಕೆ ಪ್ರಯತ್ನಪಟ್ಟರೆ
ನೀವು ಕಷ್ಟ ಅನುಭವಿಸ್ತೀರಾ!"
"ಮಾನವಂತರ ಹುಡುಗಿ! ಹೋಗಿ, ಹೋಗಿ. ನನಗೆಲ್ಲಾಗೊತ್ತು. ಹೋಟ್ಲಲ್ಲಿ
ಪ್ರತಿಯೊಬ್ಬರ ಬಾಯಲ್ಲೂ ಇದೆ ಆ ಮಾನವಂತರ ಹುಡುಗಿ ಹೆಸರು. ಬಲ್ಲಿರೋ?"
"ಬಾಯ್ಮುಚ್ಚಿ!"
"ಹೊಡೀತಿರೇನು? ಹೊಡಿರಿ. ನೋಡ್ಬಿಡೋಣ."
"ನಿಮಗೆ ಹೊಡೆದು ನಾನ್ಯಾಕೆ ಕೈಕೊಳೆ ಮಾಡ್ಕೊಳ್ಲಿ?"
"ಓಹೋ! ತಮ್ಮ ಕಥೆ ನನಗೇನೂ ತಿಳೀದೂಂತ ಭಾವಿಸಿದಿರೊ?"
ಕೊಡಲಿಯಿಂದ ಎಷ್ಟು ಕಡಿದರೂ ಮಿಸುಕದ ಕೊರಡಿನಂತಿದ್ದ ರಾಮಾಚಾರಿ.
"ಥೂ! ನಿಮ್ಮ ಹತ್ತಿರ ಮಾತನಾಡೋದೂ ನಾಚಿಕೆಗೇಡು!"
"ಹಾಗಾದರೆ ದೊಡ್ಡ ಮನಸ್ಸು ಮಾಡಿ ತಮ್ಮ ಹಾದಿ ಹಿಡೀರಿ."
"ಹಿಡೀತೀನಿ ರಾಮಾಚಾರಿ. ಆದರೆ ಒಂದು ವಿಷಯ ನೆನಪಿಟ್ಕೊ. ಇಷ್ಟಕ್ಕೆ
ಹುಷಾರಾದಿ ಅಂದ್ರೆ ಬದುಕೀಯಾ. ಇಲ್ದೆ ಹೋದ್ರೆ ಚಪ್ಪಲಿ ಏಟು ಬಿಗಿದು ಇಲ್ಲಿಂದ
ನಿನ್ನನ್ನು ಕಳಿಸ್ತಾರೆ."
"ಬಹಳ ಕಂಡಿದೀನಿ ಹೋಗಯ್ಯ."
"ಬಡಿವಾರ ಬಿಟ್ಬಿಡು. ನಾನಿಷ್ಟು ಹೇಳಿರೋದೆ ಎಚ್ಚರಿಕೇಂತ ತಿಳ್ಕೊ!"
ಅಷ್ಟರಲ್ಲೆ ಗಂಟೆ ಬಾರಿಸಿತು. ಅವರಿಬ್ಬರೂ ನಾಲ್ಕಾರು ಮಾರುಗಳ ಅಂತರದಲ್ಲಿ
ಬೇಗ ಬೇಗನೆ ಶಾಲೆಗೆ ನಡೆದರು.
ನಂಜುಂಡಯ್ಯ ಕೇಳಿದರು:
"ಮರದ ಕೆಳಗೆ ನಿಂತ್ಕೊಂಡು ಮಾತಾಡ್ತಾ ಇದ್ದೋರು ನೀವೇ ಏನು? ಏನು
ಸಮಾಚಾರ?"
"ಏನಿಲ್ಲ ಸಾರ್," ಎಂದ ಜಯದೇವ.