ಪುಟ:ನವೋದಯ.pdf/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

347

.....ಪರೀಕ್ಷೆ ಸಮೀಪಿಸಿತು ಎನ್ನುವಷ್ಟರಲ್ಲಿ ಹುಡುಗರು ಮುಷ್ಕರ ಹೂಡಿದರು.
'ಪರೀಕ್ಷೆ ಮುಂದಕ್ಕೆ ಹಾಕಿ' ಎಂದು ಗದ್ದಲ ಮಾಡಿದರು. ಕಲ್ಲುಗಳು ಹಾರಾಡಿದುವು.
ಲಾಠಿಗಳು ಕಾಣಿಸಿಕೊಂಡುವು.
ಒಂದು ತಿಂಗಳ ಕಾಲ ಮುಂದೆ ಬಿತ್ತು ಪರೀಕ್ಷೆ.
"ಒಳ್ಳೆ ಗೋಳು. ಈಗ ಮುಗಿದೇ ಹೋಗಿದ್ದರೆ ವಾಸಿಯಾಗಿತ್ತು," ಎಂದ
ಜಯದೇವ.
"ಹೋಗಲಿ ಬಿಡಿ. ಚೆನ್ನಾಗಿ ಓದ್ಕೊಳ್ಳಿ. ಫಸ್ಟ್ ಕ್ಲಾಸ್ ಬರುವಿರಂತೆ,"
ಎಂದು ಶ್ರೀಪತಿರಾಯರು, ಸುನಂದಾ ಮತ್ತು ಜಯದೇವ ಇಬ್ಬರನ್ನೂ ಉದ್ದೇಶಿಸಿ
ಹೇಳಿದರು.
....ಅಂತೂ ಒಮ್ಮೆ ಪರೀಕ್ಷೆ ಮುಗಿದ ಬಳಿಕ, ಪರ್ವತ ಭಾರವನ್ನು ಭುಜದಿಂದ
ಕೆಳಕ್ಕೆ ಇಳಿಸಿದಂತಾಯಿತು ಜಯದೇವ ಸುನಂದೆಯರಿಗೆ.
ತಾವೂ ಆ ದಿನಕ್ಕೋಸ್ಕರವೇ ಕಾದಿದ್ದರೇನೋ ಎಂಬಂತೆ ಶ್ರೀಪತಿರಾಯರು
ಒಂದು ಸಂಜೆ ಜಯದೇವನೊಬ್ಬನನ್ನೆ ಜತೆಯಲ್ಲಿ ಕರೆದೊಯ್ದರು.
ಅನಂತರದ ಸಂಭಾಷಣೆಯನ್ನು ಜಯದೇವ ನಿರೀಕ್ಷಿಸಿಯೇ ಇದ್ದ.
"ನಿನ್ನ ಮದುವೆಯ ವಿಷಯ ಗೋವಿಂದಪ್ಪನವರು ಏನು ಹೇಳ್ತಿದಾರೆ
ಜಯಣ್ಣ?"
"ಆವತ್ತೆ ಹೇಳಿದೆನಲ್ಲ ಸಾರ್. ಬೇಗ್ನೆ ಮಾಡ್ಕೊ ಅಂತಾರೆ."
"ಫಲಿತಾಂಶ ಬಂದ ತಕ್ಷಣ ಪುನಃ ಉಪಾಧ್ಯಾಯನಾಗ್ತಿ, ಅಲ್ವೆ?"
"ಹೂಂ. ಆ ಹಳ್ಳಿಗೇ ಹೋಗ್ತೀನಿ."
"ಯಾಕೆ, ಹೈಸ್ಕೂಲಲ್ಲಿ ಎಲ್ಲಾದರೂ ಕೆಲಸ ಸಿಗಲಾರದೇನು?"
"ಸಿಗಬಹುದು. ಆದರೂ ಅಲ್ಲಿಗೆ ಹೋಗಿ ಸ್ವಲ್ಪ ದಿನ ಇರಬೇಕೂಂತ ಆಸೆ".
“ಒಂಟಿಯಾಗಿ ಪುನಃ ಅಲ್ಲಿಗೆ ಹೋಗೋದಿಲ್ಲ ತಾನೇ?"
ಎಷ್ಟು ಬೇಡವೆಂದರೂ ಮುಖ ಕೆಂಪೇರಿತ್ತು; ಕತ್ತು ಅಲುಗಿತು.
ಜಯದೇವ ಸುಮ್ಮನಿದ್ದನೆಂದು ಅವರೇ ಮಾತು ಮುಂದುವರಿಸಿದರು.
"ಸುನಂದಾದು ಇಂಟರ್ ಮುಗೀತು. ಮುಂದೆ ಓದೋ ವಿಷಯದಲ್ಲಿ ಕುತೂ
ಹಲವೇನೂ ಇಲ್ಲ ಆಕೆಗೆ. ಏನ್ಮಾಡೋಣಾಂತೀಯ?"
ಒಳ್ಳೆಯ ಸಂದಿಗ್ಧ! ಆತನೆ ಉತ್ತರ ಕೊಡಬೇಕಾದವನು?
"ನಾನು ಹ್ಯಾಗ್ಸಾರ್ ಹೇಳ್ಲಿ ?”
"ನೀನಲ್ದೆ ಇನ್ಯಾರಯ್ಯ ಹೇಳ್ಳೇಕು?"
ಪುನಃ ಮೌನ. ಶ್ರೀಪತಿರಾಯರೇ ಜಯದೇವನನ್ನೊಮ್ಮೆ ದಿಟ್ಟಿಸಿ ಅಂದರು:
"ಯಾಕೆ? ನಮ್ಮ ಹುಡುಗಿಯ ಕೈ ಹಿಡಿಯೋದು ಇಷ್ಟ ಇಲ್ವೋ?"
ಅರಳಿದ ಮುಖವನ್ನು ಮರೆಸಲೆಂದು ತಲೆತಗ್ಗಿಸಿದ ಜಯದೇವ.