ಪುಟ:ನಾಸ್ತಿಕ ಕೊಟ್ಟ ದೇವರು.pdf/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೯೪

ನಾಸ್ತಿಕ ಕೊಟ್ಟ ದೇವರು

ಯಾಗೋದಿಲ್ವಂತೆ. ನಿಮ್ಮ ಮಗಳಿಗೆ ನೀವು ವರ ಹುಡುಕ್ತಿದೀರಿ. ನನ್ನ ಮಗಳಿಗೆ ನಾನು ವರ ಹುಡುಕ್ತಿದೇನೆ, ಅಷ್ಟೆ ... ”
“ಛೇ ! ಅದು ಬೇರೆ ವಿಷಯ. ನೀವು ಯಾಕೋ ನಿರಾಶರಾಗಿದೀರಿ. ... ನಾನು-ನಾನು ಪ್ರಸಾದನ ಕೂಡೆ ಮಾತಾಡ್ಲೆ ?”
“ತಂದೆಯ ಮಾತು ಕೇಳದವನು ಇನ್ನೊಬ್ಬರ ಮಾತಿಗೆ ಕಿವಿ ಕೊಡ್ತಾನ ಚಂದ್ರಶೇಖರಯ್ಯ ? ಈ ವಿಷಯ ಸದ್ಯಕ್ಕೆ ಮರೆತ್ಬಿಡಿ.”
“ನಾನು-ನಾನು ಪ್ರಸಾದನ ಜತೆ ಮಾತಾಡೋದು ಬೇಡ-ಅಂತೀರಾ ?”
“ನೀವು ದಯವಿಟ್ಟು ಮನೆಗೆ ಹೋಗಿ.”
ವಿಶ್ವನಾಥಯ್ಯ ಎಷ್ಟೇ ಮೃದುವಾಗಿ ಆಡಲು ಯತ್ನಿಸಿದರೂ ಪದಗಳು ನಿಷ್ಠುರವಾಗಿದ್ದುವು.
ಚಂದ್ರಶೇಖರಯ್ಯ ನೀಳವಾಗಿ ಉಸಿರು ಬಿಟ್ಟರು. ಅವರ ಹೃದಯ ಅತ್ತಿತು.

ರಾತ್ರಿಯ ಗಾಡಿಗೆ ಪ್ರಸಾದ ಹೊರಡುವನೆಂಬುದು ಖಚಿತವಾದಾಗ ವಿಶ್ವನಾಥಯ್ಯನವರ ಮಾನಸಿಕ ಯಾತನೆ ತೀವ್ರಗೊಂಡಿತು.
ಕೋಟು ಟೋಪಿಗಳನ್ನು ಧರಿಸಿ, ಚಪ್ಪಲಿ ಮೆಟ್ಟಿಕೊಂಡು, ರಸ್ತೆಗಿಳಿದು, ಗೊತ್ತು ಗುರಿ ಇಲ್ಲದೆ ಉದ್ದಕ್ಕೂ ಅವರು ಸಾಗಿದರು.
ಫುಟ್ಪಾತಿನ ಮೇಲೆ ನಡೆದಾಗ ಕೊರಕಲು ಕಲ್ಲುಗಳೊಳಗೆ ಪಾದ ಸಿಲುಕಿ ತಾವು ಬಿದ್ದು ಕಾಲು ಮುರಿದರೊ? ರಸ್ತೆ ದಾಟುವಾಗ ಬಿ.ಟಿ.ಎಸ್. ಬಸ್ಸು ತಮ್ಮನ್ನು ಅಪ್ಪಳಿಸಿದರೊ ? ಅಥವಾ ನಡೆಯುತ್ತಲಿದ್ದಂತೆ ಕುಸಿದು ಬಿದ್ದು ತಮಗೆ ಹೃದಯಸ್ತಂಭನವಾದರೊ ?
ಹಾಗೆ ಆಗುವುದು ಒಂದು ರೀತಿಯಲ್ಲಿ ಒಳ್ಳೆಯದೇ ಅಲ್ಲವೇ? ತಾವಿನ್ನು ಬದುಕಿ ಯಾವ ಸುಖ ಕಾಣಬೇಕು? ತಾವು ಹಾಲೆರೆದು ಬೆಳೆಸಿದ ಒಬ್ಬನೇ ಮಗ ಹೆಡೆ ಎತ್ತಿದ ಅಂದ ಮೇಲೆ?