ಪುಟ:ನಾಸ್ತಿಕ ಕೊಟ್ಟ ದೇವರು.pdf/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೯೬

ನಾಸ್ತಿಕ ಕೊಟ್ಟ ದೇವರು

-ಪತ್ರಿಕೆಯಲ್ಲಿ ಒಂದು ಶಿರೋನಾಮೆ.
ಹಹ್ಹ !
ಕೊನೆಯಲ್ಲಿ ಹುಚ್ಚು ಹುಡುಗಿ ಗಿರಿಜೆ ಓಡಿ ಬಂದು ಗುರುತು ಹಿಡಿಯುತ್ತಾಳೆ ಎಂದಿಟ್ಟುಕೊಳ್ಳೋಣ. ಆಗ ವಿಶ್ವನಾಥಯ್ಯ ಯಾಕೆ ಸತ್ತ ಅಂತ ಊಹಾಪೋಹ ನಡೆದೀತು. ದೀರ್ಘಕಾಲದ ಹೊಟ್ಟೆ ನೋವಿನಿಂದ ಪಾರಾಗುವುದಕ್ಕೋಸ್ಕರ ವಿಷಪ್ರಾಶನ? ವಿಷ ಕುಡಿದುದಕ್ಕೆ ಪುರಾವೆ ಇಲ್ಲವಲ್ಲ? ['ಹೊಟ್ಟೆ ನೋವಲ್ಲ-ಇದು ಹೃದಯದ ನೋವು, ಹೃದಯದ ನೋವು !] ಆತ್ಮಹತ್ಯೆ? ಉರುಲು ಹಾಕಿಕೊಂಡುದಕ್ಕೆ ಗುರುತೇ ಇಲ್ಲವಲ್ಲ
... ವೃದ್ಧಾಪ್ಯದ ನಿಶ್ಯಕ್ತಿಯಿಂದ ಏಳಲಾಗದೆ ಉದ್ಯಾನದ ಕಲ್ಲುಬೆಂಚಿನ ಮೇಲೆ ರಾತ್ರಿಯನ್ನು ಕಳೆದುದರಿಂದ, ಹಿಮಪೀಡಿತರಾಗಿ ಹೆಪ್ಪುಗಟ್ಟಿ ಕಾಲವಾದರು! ಭೇಷ್ !
ಆಡುತ್ತಿದ್ದ ಎಳೆಯ ಹುಡುಗನೊಬ್ಬ ಕಾರಂಜಿಯ ಬಳಿ ಹೋಗಿ ಅಂಗೈಯಿಂದ ನೀರನ್ನು ಬಡೆದ. ಕೊಳಕು ನೀರು ಉಡುಪಿನ ಮೇಲೆ ಬಿದ್ದು, ಬಟ್ಟೆ ಹಾಳಾಯಿತು. ಗಂಡನೊಡನೆ ಮಾತನಾಡುತ್ತ ಕುಳಿತಿದ್ದ ತಾಯಿ ಬಂದು, ಆ ಹುಡುಗನ ಕಿವಿ ಹಿಂಡಿದಳು. ಹುಡುಗ 'ಅಯ್ಯೋ!' ಎಂದು ಚೀರಿದ.
ಆ ದೃಶ್ಯವನ್ನು ಕಂಡ ವಿಶ್ವನಾಥಯ್ಯನಿಗೆನ್ನಿಸಿತು:
'ಪ್ರಸಾದ ಚಿಕ್ಕವನಾಗಿದ್ದರೆ ಕಿವಿ ಹಿಂಡಿ ಬುದ್ದಿ ಕಲಿಸುತ್ತಿದ್ದೆ.'
... ಕತ್ತಲಾಯಿತು. ರಸ್ತೆಯಂಚಿನ ನಿಯೊನ್ ಲೈಟುಗಳ ಮಂದ ಬೆಳಕು ಉದ್ಯಾನವೃತ್ತದ ಮೇಲೆ ಬಿದ್ದಿತು.
ಮೆಲ್ಲಮೆಲ್ಲನೆ ಜನ ಕರಗಿದರು.
ವಿಶ್ವನಾಥಯ್ಯ ಕುಳಿತಲ್ಲಿಂದ ಕದಲದೆ ಹೊತ್ತು ಕಳೆದರು. ಮೆದುಳು ಯೋಚನೆಯ ತಂತಿಗಳ ಮೇಲೆ ಕಸರತ್ತು ನಡೆಸಿತ್ತು. ಆಯಾಸವಾದಾಗ ಒರಗುಬೆಂಚೇ ತಲೆಗೆ ದಿಂಬು. ಅದಕ್ಕೆ ಆತು ಮೆದುಳಿಗೆ ವಿಶ್ರಾಂತಿ ...
. . . . ಮನೆಯಲ್ಲಿ ಪ್ರಸಾದನ ತಾಯಿ, 'ಕತ್ತಲಾಯಿತು. ಇವರ ಸುಳಿವಿಲ್ಲವಲ್ಲ' ಎಂದು ಚಡಪಡಿಸಿದರು. ಬಂದುದನ್ನು ಅನುಭವಿಸಬೇಕು; ಸುಮ್ಮನೆ ರೋದಿಸಿ ಏನು ಫಲ?- ಎನ್ನುವುದು ಅವರ ವಿಚಾರ ಸರಣಿ.