ಪುಟ:ನಾಸ್ತಿಕ ಕೊಟ್ಟ ದೇವರು.pdf/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಯಾವ ಜನ್ಮದ ಶಾಪ ?

೯೭

ದೂರ ದೇಶಕ್ಕೆ ಹೋಗುತ್ತೇನೆ - ಎನ್ನುತ್ತಿದ್ದಾನೆ ಮಗ. ಹೊರಡುವುದಕ್ಕೆ ಮುನ್ನ ತಂದೆ-ಮಕ್ಕಳ ನಡುವೆ ವಿರಸ ಬೇಡ, ಎಂಬುದು ಆಕೆಯ ಆಸೆ. ಅವರು ಬಂದರೆ, ಮಕ್ಕಳಿಗೂ ಅವರಿಗೂ ಜತೆಯಾಗಿ ಬಡಿಸಬಹುದು.
ಆ ಸೌಹಾರ್ದ ಭೋಜನ ಸಾಧ್ಯವಾಗದು-ಎಂಬ ಶಂಕೆ ಪ್ರಸಾದನಿಗೆ. ವಿವೇಕವಿದ್ದವರಿಗೆ ತಿಳಿಯಹೇಳಬಹುದು. ಹಟಮಾರಿಗಳನ್ನು ಹಾದಿಗೆ ತರುವುದಕ್ಕಾದೀತೆ? ವಯಸ್ಸಾದಂತೆ ಬುದ್ಧಿ ಕಡಮೆಯಾಗುತ್ತ ಹೋಗುತ್ತದಲ್ಲ! ಇದು ಭಾರತೀಯ ಗುಣವಿಶೇಷವಿರಬೇಕು.
ಗಿರಿಜೆಗೂ ಒಂದು ಬಗೆಯ ಆತಂಕ. ಎರಡು ಮೂರು ಮಾತುಕತೆಗಳು ಮುರಿದ ಮೇಲೆ ಮದುವೆಯ ಯೋಚನೆಯನ್ನು ಅವಳು ಬಿಟ್ಟುಕೊಟ್ಟಿದ್ದಳು. ಆದರೆ, ತಂದೆ ಅಣ್ಣನಿಗೆ ಕಳುಹಿಸಿದ ತಂತಿ, ಪ್ರಸಾದನ ಆಗಮನ, ಪೆಟ್ಟಿಗೆಯಲ್ಲಿರಿಸಿದ್ದ ಪುಸ್ತಕ ಮತ್ತೆ ಹೊರಗೆ ಬರಲು ಕಾರಣವಾಗಿದ್ದುವು. ಅದನ್ನು ತೆರೆದು ಓದು ಮುಂದುವರಿಸಲು ಮಾತ್ರ ಅವಕಾಶವಾಗಿರಲಿಲ್ಲ, ಕ್ಷಿಪ್ರಗತಿಯಿಂದ ನಡೆದ ಘಟನೆಗಳಿಂದ. ಈಗ ತನ್ನ ಬಳಿಯಲ್ಲಿದ್ದ ಸೋದರ ಇನ್ನು ಕೆಲವೇ ದಿನಗಳ ಬಳಿಕ ಜರ್ಮನಿಯಲ್ಲಿ! ಆ ಯೋಚನೆ ಸುಂದರವಾಗಿತ್ತು. ಗೆಳತಿಯರೆದುರು ಹೇಳಿಕೊಳ್ಳಬಹುದು. ಮಾತುಕತೆಗೆ ಅದಕ್ಕಿಂತ ಹೆಚ್ಚು ಅಭಿಮಾನದ ವಸ್ತುವುಂಟೆ? ಆದರೆ, ಹೆಂಗಸರ ನಾಲಗೆಗಳ ಚಲನ ಕೌಶಲ ತನಗೆ ತಿಳಿಯದೆ? ತನ್ನ ಬೆನ್ನ ಹಿಂದೆ ಕೆಲವೊಮ್ಮೆ ತನಗೆ ಕೇಳಿಸುವಂತೆಯೂ ಕೂಡಾ, ಮಾತು ಬಂದೇ ಬರುತ್ತದೆ: 'ಇನ್ನೂ ಮದುವೆಯಿಲ್ಲ. . .'
. . . ಪ್ರಸಾದ ಸೂಟ್ಕೇಸನ್ನು ಮತ್ತೊಮ್ಮೆ ಅಣಿಗೊಳಿಸಿದ. ಗಾಡಿಯಲ್ಲಿ ಉಪಯೋಗಕ್ಕೆ ಬೇಕಾದ ಬಟ್ಟೆಗಳನ್ನೂ ಮುಖಮಾರ್ಜನದ ಸಾಧನಗಳನ್ನೂ ತೆಗೆದಿರಿಸಿದ, ಕಿಟ್‌ನಲ್ಲಿ.
ಜಗಲಿಯಲ್ಲಿ ತಂದೆ ಕುಳಿತುಕೊಳ್ಳುವ ಆರಾಮ ಕುರ್ಚಿಯ ಮೇಲೆ ಮೈಚೆಲ್ಲಿ ತಂಗಿಯತ್ತ ನೋಡಿ ಅವನೆಂದ :
“ ಅಣ್ಣಯ್ಯನ ಸಿಟ್ಟು ಇಳಿದ ಹಾಗಿಲ್ಲ, ಅಲ್ವೇನೆ ಗಿರಿಜಾ ?”
ಪ್ರಸಾದ ನಿಂತಿರುತ್ತಿದ್ದ ಬಾಗಿಲ ಚೌಕಟ್ಟಿನಲ್ಲಿ ಗಿರಿಜಾ ಈಗ ಪ್ರತಿಮೆಯಾಗಿದ್ದಳು. ಸೋದರನ ಮಾತು ಕೇಳಿ ಅವಳು ಸಣ್ಣನೆ ನಕ್ಕಳು. ಮೆಲ್ಲನೆ ಚಲಿಸಿ ಮುಂದುವರಿದು, ಬರಿದಾಗಿದ್ದ ಸ್ಟೂಲಿನ ಮೇಲೆ ಕುಳಿತಳು.