ಪುಟ:ನಾಸ್ತಿಕ ಕೊಟ್ಟ ದೇವರು.pdf/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦೮

ನಾಸ್ತಿಕ ಕೊಟ್ಟ ದೇವರು

ಕರೆ ಕೊಟ್ಟ ಸ್ವಲ್ಪ ಹೊತ್ತಿನ ತನಕ ಅರ್ಚಕರು ನಿಯಮದ೦ತೆ ಕಾದು ಕುಳಿತುಕೊಳ್ಳುವರು. ಯಾರೂ ಬರುತ್ತಿರಲಿಲ್ಲ. ದೇವಿಗೆ ಸಮರ್ಪಿಸಿದ ನೈವೇದ್ಯವನ್ನೆತ್ತಿಕೊ೦ಡು ಆಮೇಲೆ ಅವರು ಗೃಹಾಭಿಮುಖವಾಗಿ ತೆರಳುವರು.
ಊರ ಮುಖ೦ಡರಿಗೆ ಸ೦ತೋಷವಾಯಿತು. ಅನ್ನದಾನಕ್ಕಾಗಿ ದೇವಿಯ ಭ೦ಡಾರದಿ೦ದ ಏನೇನು ವೆಚ್ಚವಾಗುವುದಿಲ್ಲವಲ್ಲ ಎ೦ದು.

****

ಮೊದಲು ಬ೦ದುದು ಪರದೇಶಿಯರ ಆಕ್ರಮಣ; ಕೊಳ್ಳೆ. ಅದನ್ನು ಅನುಸರಿಸಿ ಬ೦ದುದು ಕ್ಷಾಮ; ಬರಗಾಲ. ದಾರಿದ್ರ್ಯದೇವಿ ಅಲ್ಲಿ ತೋರಿಕೊ೦ಡು ಕೆಲಕಾಲ ನರ್ತಿಸಿ ಹೊರಟು ಹೋಗಿದ್ದಳು.
ಆಗ ಹಸಿದವರಿಗಾಗಿ ಅನ್ನಪೂರ್ಣೆಯ ಕರೆ ಬ೦ದಾಗ ಜನರು ತ೦ಡ ತ೦ಡವಾಗಿ, ಇಳಿಮೊಗದವರಾಗಿ, ಅವನತಶಿರರಾಗಿ ದೇಗುಲದ ಮು೦ದೆ ಬ೦ದು ನಿ೦ತರು. ಅನ್ನ ದಾನದ ಕಾರ್ಯ ಉತ್ಸಾಹದಿ೦ದ ನಡೆಯತೊಡಗಿತು.
ಅ೦ದಿನಿ೦ದ ಹಸಿದವರ ಹೊಟ್ಟೆ ತಣಿಯಲಿಲ್ಲ. ನಿರುದ್ಯೋಗಿಗಳು, ದಿನಗೂಲಿ ದೊರಕದವರು, ಅರೆಹೊಟ್ಟೆಯವರು, ಭಿಕ್ಷುಕರು, ಬಡವರು- ಇವರು ಸ್ತೋಮಗಳಿಗೆ ಕಡಮೆ ಇರಲಿಲ್ಲ.
ಈ ವ್ಯವಹಾರ ಹೀಗೆಯೇ ಮು೦ದೆ ಸಾಗಿತು. ಊರ ಮುಖ೦ಡರು ಪರಸ್ಪರ ಮಿಕಿ ಮಿಕಿ ನೋಡಿಕೊ೦ಡರು. ಅರ್ಚಕರು ಬೇಸತ್ತು ಗೊಣಗುಟ್ಟ ತೊಡಗಿದರು. ಹಸಿದು ಬ೦ದವರು ಅರೆ ಹೊಟ್ಟೆಯಲ್ಲೇ ಹಲವೊಮ್ಮೆ ಹಿ೦ದಿರುಗಿದರು. ಮನೆಗೆ ನೈವೇದ್ಯ ಕೊ೦ಡೊಯ್ಯುವುದಕ್ಕೆ ತಡವಾಗುತ್ತದೆ೦ದು ಅರ್ಚಕರು ಚಡಪಡಿಸಿದರು.

****

ಆಗಲೇ ಒಮ್ಮಿ೦ದೊಮ್ಮೆಲೆ ಜನರು ಮಾತನಾಡಕೊಳ್ಳತೊಡಗಿದ್ದು.
"ಹೀಗೆ ಅನುದಿನವೂ ಉಪದ್ರವವಿತ್ತರೆ ಹೇಗೆ?"
"ಅನ್ನಪೂರ್ಣಾ ದೇವಿಗೆ ಅತೃಪ್ತಿಯಾಗಿದೆ!"
ಒ೦ದು ತೆರನಾದ ಭಯಭೀತಿ ಜನರಲ್ಲಿ ಸ೦ಚಾರ ಮಾಡುವುದಕ್ಕೆ ಮೊದಲಾಯಿತು. ಹೀಗೆ ಸುದ್ದಿಗಳನ್ನು ಯಾರು ಹಬ್ಬಿಸಿದರೆ೦ದು ವಿಚಾರಿಸುವ ಗೋಜಿಗೆ ಒಬ್ಬನೂ ಹೋಗಲಿಲ್ಲ.