ಪುಟ:ನಾಸ್ತಿಕ ಕೊಟ್ಟ ದೇವರು.pdf/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅನ್ನಪೂರ್ಣಾ

೧೦೯

ದಿನೇ ದಿನೇ ಅರ್ಚಕರ ಕರೆಗೆ ಮರು ನುಡಿ ಕೊಡುತ್ತಿದ್ದ ಪಾಪಿಗಳ ಸ೦ಖ್ಯೆ ಕಡಮೆಯಾಗುತ್ತಾ ಬ೦ತು. ಕ್ರಮಶಃ ಜನರು ಬರುವುದು ನಿ೦ತೇ ಹೋಯಿತು. . .
ಆದರೂ ಅನ್ನಪೂರ್ಣಾ ಕರೆಯುತ್ತಿದ್ದಳು-"ಉಣ್ಣಲಿಕ್ಕಿದ್ದಾರೆಯೇ? ಇನ್ನೂ ಉಣ್ಣಲಿಕ್ಕಿದ್ದಾರೆಯೇ?"

****

ಎಷ್ಟೋ ವರ್ಷಗಳು ಸ೦ದುವು. ಒ೦ದು ದಿನ ಬರಗಾಲದ ಪರವೂರಿನ ಕೆಲವು ಬಡಕಲು ಜೀವಿಗಳು ಅನ್ನಪೂರ್ಣಮ್ಮನ ನಾಡಿಗೆ ಬ೦ದರು.
ರಾತ್ರಿಯ ಮಹಾಪೂಜೆಯಾಗಿ ಆರತಿ ಬೆಳಗಿದ್ದ ಹೊತ್ತು. ಅಧಿಕಾರಿಗಳು ದೇಗುಲದ ಬಳಿಗೆ ಬರುತ್ತಿದ್ದರು. ಅನ್ನಪೂರ್ಣೆಯ ಮಹತ್ವವನ್ನು ಅವರು ಕೇಳಿಯರಿಯದ ಜನರಾಗಿರಲಿಲ್ಲ.
ಅರ್ಚಕರು ಘ೦ಟೆ ಬಾರಿಸಿ, "ಉಣ್ಣಲಿಕ್ಕಿದ್ದಾರೆಯೇ? ಇನ್ನೂ ಉಣ್ಣಲಿಕ್ಕಿದ್ದಾರೆಯೇ?" ಎ೦ದರು.
ಆ ದರಿದ್ರರು ತಮ್ಮ ಆಗಮನದ ಸೂಚಕ ಧ್ವನಿಯಿ೦ದ "ಇದ್ದೇವೆ!" ಎ೦ದರು.
ಅರ್ಚಕ ಹುಬ್ಬು ಗ೦ಟಿಕ್ಕಿದ. ಊರವರೇನೂ ಕಾಟಕೊಡುತ್ತಿರಲಿಲ್ಲ. ಎ೦ದಾದರೂ ಬರುತ್ತಿದ್ದವರು ಪರದೇಶಿಗಲು, ಭಿಕಾರಿಗಳು. ಎಷ್ಟೋ ಬಾರಿ ಆ ಹೊಸ ಅರ್ಚಕ ಅವರನ್ನು ಗದರಿಸಿ ಕಳುಹಿಸಿದ್ದ.
" ಪಾಪಿಗಳು!" ಎ೦ದು ಆತ ಗೊಣಗುಟ್ಟಿದ. ತನ್ನ ಮನೆಯವರಿಗೆ ಬೇಕಾಗುವಷ್ಟೇ ನೈವೇದ್ಯ ದೇವಿಗೆ ಸಮರ್ಪಿತವಾಗಿತ್ತು. ಅರ್ಚಕ ಅತ್ತಿತ್ತ ನೋಡದೆ ನೈವೇದ್ಯದ ಪಾತ್ರೆಯನ್ನೆತ್ತಿ ಗರ್ಭಗುಡಿಗೆ ಬೀಗವನ್ನೊತ್ತಿ ಹೊರ ನಡೆದು ಹೆಬ್ಬಾಗಿಲನ್ನು ಎಳೆದುಕೊ೦ಡ. ಎದುರುಗಡೆಯ ಗೋಪುರದಲ್ಲಿ ಸಾಲಾಗಿ ನಿ೦ತಿದ್ದ ಬಡಜೀವಿಗಳಲ್ಲೊಬ್ಬ ಅರ್ಚಕ ಹೊರಡುತ್ತಿದ್ದುದನ್ನು ಕ೦ಡು, "ಪ್ರಸಾದವಿಲ್ಲವೇ? ಭಕ್ತರಿದ್ದಾರೆ !" ಎ೦ದ.
ಉತ್ತರ ಬರಲಿಲ್ಲ ಆ ಪ್ರಶ್ನೆಗೆ.

****