ಪುಟ:ನಾಸ್ತಿಕ ಕೊಟ್ಟ ದೇವರು.pdf/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೧೧

ಕಥೆ : ಎಂಟು
ಅನ್ನದೇವರ ರೈಲು ಪ್ರಯಾಣ



ಕಿಷ್ಕಿಂಧೆಯ ರಾಜದಾನಿಯಲ್ಲಿ ಆ ದಿನ ಎಲ್ಲಿಲ್ಲದ ಸಡಗರ. ಆ ಸಮಾರಂಭಕ್ಕೆಂದು ರಜಾ ದಿನವಾದ ಭಾನುವಾರವನ್ನೆ ಆಳುವವರು ಆರಿಸಿದ್ದರು. ಐತಿಹಾಸಿಕ ಮಹತ್ವದ ಆ ಘಟನೆಗೆ ಪ್ರೇಕ್ಷಕರಾಗುವ ಅವಕಾಶ ಭಾಗ್ಯನಗರದ ಪೌರರಿಗೆ ಲಭಿಸಿತ್ತು. ಬೆಳಗ್ಗೆ ಬೇಗನೆದ್ದು ಜನ, ಮನೆಗಳಿಂದಲೂ ಹೊರಬಿದ್ದರು. ಹತ್ತು ಮೂಲೆಗಳಿಂದಲೂ ಹರಿದು ಬಂದುವು ಜನನದಿಗಳು. ಆ ಪ್ರವಾಹಗಳ ಸಂಗಮ, ನಗರದ ರೈಲು ನಿಲ್ದಾಣದಲ್ಲಿ. ವಿಶೇಷ ಆಸ್ಥೆಯಿಂದ ಅಲಂಕರಿಸಿದ್ದ ಭವ್ಯ ಕಟ್ಟಡ. ತಳಿರು ತೋರಣ, ಹೂ ಹಸಿರು, ಮೊಳಗುತ್ತಿದ್ದ ಮಂಗಳ ವಾದ್ಯಗಳು. ಭೂಮಿಯ ಮೈ ಮೇಲೆ ಕಾದ ಕಬ್ಬಿಣದಿಂದ ಎಳೆದು ಬರೆಗಳ ಕರಿಯ ಗೆರೆಗಳಂತೆ, ರೈಲು ಕಂಬಿಗಳು ಕಟ್ಟಡದೆದುರು ಮಲಗಿದ್ದುವು. ಉತ್ತರ ದಕ್ಷಿಣ ಪೂರ್ವ ಪಶ್ಚಿಮಗಳತ್ತ ಪ್ರವಾಸ ಹೊರಟಿದ್ದ ಪ್ರಯಾಣಿಕರಿದ್ದರು, ಪ್ಲಾಟ್ಫಾರ್ಮಿನ ಮೇಲೆ. ಊರ ಜನರ ಗುಂಪು ಗುಂಪಾಗಿ ಬರತೊಡಗಿದಂತೆ ಕೆಲ ಪ್ರಯಾಣಿಕರು ಹಿಂದೀ ಭಾಷೆಯಲ್ಲಿ ಕೇಳಿದರು:
" ಏನು ವಿಶೇಷ ?"
ಕನ್ನಡ ಬಾಂಧವನೊಬ್ಬ ತನಗೆ ಬರುತಿದ್ದ ಹರುಕು ಮುರುಕು ಹಿಂದಿಯಲ್ಲಿ ಉತ್ತರವಿತ್ತ:
"ರೂಪಾಯಿಗೆ ಎರಡು ಸೇರು."
ಅರ್ಥವಾಗದೆ ಆ ಮಹಾನುಭಾವ ಕೇಳಿದ:
"ಏನು?"
ಆ ಪರಿಸ್ಥಿತಿಯಲ್ಲಿ ಇಂತಹ ಪ್ರಶ್ನೆ ಬಂದುದನ್ನು ಕಂಡು ಕನ್ನಡಿಗನಿಗೆ ಆಶ್ಚರ್ಯವೆನಿಸಿತು.
"ಅಕ್ಕಿ !"