ಪುಟ:ನಾಸ್ತಿಕ ಕೊಟ್ಟ ದೇವರು.pdf/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೧೨

ನಾಸ್ತಿಕ ಕೊಟ್ಟ ದೇವರು

ಕನ್ನಡ ಬರುತ್ತಿದ್ದರೂ ಹಿಂದಿ ಅರ್ಥವಾಗುತ್ತಿದ್ದರೂ ಹತ್ತಿರದಲ್ಲೇ ಇದ್ದೊಬ್ಬ ತಮಿಳ ತನ್ನ ಭಾಷೆಯಲ್ಲಿ ಕೇಳಿದ:
"ಏನು ಸಮಾಚಾರ ?"
ತನಗೆ ಬರುತ್ತಿದ್ದ ಹರುಕು ಮುರುಕು ತಮಿಳಿನಲ್ಲಿ ಕನ್ನಡಿಗ ಸಂತೋಷದಿಂದ ಸಮರ್ಪಕವಾಗಿ ಉತ್ತರಿಸಿದ.
ಗುಜು ಗುಜು ಸದ್ದಾಯಿತು. "ದಾರಿ ಬಿಡಿ! ದಾರಿ ಬಿಡಿ!" ಎಂದರು ಯಾರೋ. ಕಿಷ್ಕಿಂಧೆಯ ಮುಖ್ಯಮಂತ್ರಿ ಆಗಮಿಸಿದರು.
ಜುಕು ಜುಕು ಸದ್ದಾಯಿತು. ಅಗೋ ಬಂತು!ಅಗೋ ಬಂತು! ಎಂದರು ಜನ. ಅಲಂಕರಿಸಿದ್ದ ರೈಲುಗಾಡಿ, ಷೆಡ್ಡಿನಿಂದ ಹೊರಬಂದು ಜನರಿಗೆ ಸಮಿಪವಾಗಿ ನಿಂತಿತು.
'ಗೂಡ್ಸ್ ಗಾಡಿಗೆ ಅಲಂಕಾರ,' ಎಂದು ಮೂಲೆಯಲ್ಲಿ ನಿಂತಿದ್ದ ಒಬ್ಬರು ಗೊಣಗಿದರು.
ಆದರೆ ಅನ್ನ ದೇವರು ಪ್ರಯಾಣ ಮಾಡಲು ಬಯಸಿದ್ದುದು ಆ ಗಾಡಿಯಲ್ಲೇ.
ಪ್ರವಾಸದ ರೈಲುಗಳು ಸಿದ್ಧವಾಗಿ ನಿಂತಿದ್ದುವು. ಆದರೆ ಪ್ರಯಾಣಿಕರು ಯಾರೂ ಅತ್ತ ಸುಳಿಯಲಿಲ್ಲ. ಕಿಷ್ಕಿಂಧೆಯ ಸುಂದರ ಸ್ಥಳಗಳನ್ನು ನೋಡಲು ಬಂದಿದ್ದ ಆ 'ಪರಊರಿನ' ಜನರು, ಧರ್ಮಪುರದವರ ಉತ್ಸಾಹ ಕಂಡು ತಾವೂ ಉತ್ಸುಕರಾಗಿ ಅಲ್ಲೇ ನಿಂತರು.
ಸಂದೇಹಗ್ರಸ್ತ ಮನುಷ್ಯನಿಲ್ಲದ ಪ್ರಪಂಚ ಸಾಧ್ಯವೇ?
ಒಬ್ಬ ಕೇಳಿದ:
"ಆ ಗಾಡೀಲಿದೆಯಾ ಅಕ್ಕಿ?"
"ಹೂಂ," ಎಂದ. ಎಲ್ಲವನ್ನೂ ತಿಳಿದಿದ್ದ ಇನ್ನೊಬ್ಬ.
"ಈವರೆಗೆ ಎಲ್ಲಿತ್ತು?"
"ಉತ್ತರ ದೇಶದಿಂದ ನಿನ್ನೆಯೇ ಬಂತು ಕಣ್ರೀ. ದಿಲ್ಲಿಯ ರಾಜರು ಕೊಟ್ಟ ಉಡುಗೊರೆ."
"ಓ!"
"ಇವತ್ತು ಇಲ್ಲಿಂದ ಹೊರಡುತ್ತೆ ನಮ್ಮ ರೈಲಿನಲ್ಲಿ."
"ಯಾವ ಊರಿಗೆ?"