ಪುಟ:ನಾಸ್ತಿಕ ಕೊಟ್ಟ ದೇವರು.pdf/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅನ್ನ ದೇವರ ರೈಲು ಪ್ರಯಾಣ

೧೧೩

'ಎಲ್ಲಾ ಊರಿಗೂ. ಕಿಷ್ಕಿಂಧೆಯ ಮೂಲೆ ಮೂಲೆಗೂ.'
ಅಕ್ಕಿಯ ಅಭಾವ ಉಂಟಾಗಿತ್ತು, ಕಿಷ್ಕಿಂಧೆಯಲ್ಲಿ. ಜನ, ಒಂದು ಊರಿನಿಂದ ಇನ್ನೊಂದು ಊರಿಗೆ, 'ಕ್ಷಾಮ ಸಮಾಚಾರ'ದ ವಿಷಯ ಕಾಗದ ಬರೆಯ ತೊಡಗಿದ್ದರು. ಹಾಹಾಕಾರವೆದ್ದಿತು ಬಡಬಗ್ಗರಿಂದ. [ಅಂಥವರ ಸಂಖ್ಯೆಯೇ ಹೆಚ್ಚು ಎಲ್ಲ ಕಡೆಗಳಲ್ಲೂ.] ಅಕ್ಕಿ ಪಲ್ಲಕ್ಕೆ ಅರವತ್ತು ರೂಪಾಯಿ, ಎಪ್ಪತ್ತು, ಎಂಬತ್ತು... ನೂರಾದರೆ ಗತಿ? ರೂಪಾಯಿಗೆ ಒಂದೂ ಮುಕ್ಕಾಲು ಸೇರು ಚಟಾಕು, ಚಟಾಕು ಕಡಮೆ ಒಂದೂ ಮುಕ್ಕಾಲು ಸೇರು, ಒಂದೂವರೆ, ಒಂದೂಕಾಲು . . . ಒಂದಾದರೆ ಗತಿ? ಅಷ್ಟರಲ್ಲೇ ಅನ್ನ ದೇವರ ಅಭಯ ದೊರೆತಿತ್ತು: 'ಹೆದರಬೇಡಿ!' ಆ ಅಭಯವಾಣಿಯನ್ನು ದೇವರ ಪೂಜಾರಿಗಳಾಗಿ ಮಂತ್ರಿವರ್ಯರು ಜನತೆಗೆ ಮುಟ್ಟಿಸಿದರು.
ಜನ ಹರ್ಷಧ್ವನಿ ಮಾಡಿದರು, ಆ ಸಂದೇಶ ತಲುಪಿದಾಗ. ಕಿಷ್ಕಿಂಧೆಯ ಜನರು ಅನ್ನ ಸಂಕಟ ನೀಗುವ ಸನ್ನಿವೇಶ ಸ್ವಾಗತಾರ್ಹವಾಗಿತ್ತು.
ಸರಕಾರದ ವಕ್ತಾರರು ಖಾಸಗಿಯಾಗಿ ಹೇಳಿದ ಮಾತು ಪತ್ರಿಕೆಗಳಲ್ಲಿ ಪ್ರಕಟವಾಯಿತು:
'ಇನ್ನು ಯಾವ ಯೋಚನೆಯೂ ಇಲ್ಲ. ಒಮ್ಮೆ ಫುಡ್ ಸ್ಪೆಷಲ್ಲು ಹೋಗಿ ಬರಲಿ. ಅನ್ನದೇವರು ಎಲ್ಲ ಕಡೆಗಳಲ್ಲೂ ಪ್ರತ್ಯಕ್ಷವಾಗಲಿ. ಆ ಮೇಲೆ ನೋಡುವಿರಂತೆ. ಅಕ್ಕಿ ತಾನೇ ತಾನಾಗಿ ಹೊರ ಬರುತ್ತೆ...!'
ರಾಹು ಕಾಲ ಕಳೆದಿತ್ತು. ಅರ್ಚಕರು ಮಂತ್ರಗಳನ್ನು ಪಠಿಸಿದರು. ಶಂಖಧ್ವನಿಯಾಯಿತು. ಅದನ್ನು ಮೀರಿಸಿ ಧ್ವನಿವರ್ಧಕದ ಮೂಲಕ ಮಂತ್ರಿವರ್ಯರ ಮಾತು ಕೇಳಿಬಂತು:
'ನಾವು ಕೊಟ್ಟ ಮಾತನ್ನು ನಡೆಸುವವರಲ್ಲಿ ಎಂತ ಯಾರು ಹೇಳುತ್ತಾರೆ? ಇಗೋ, ಜನರ ಸಹಾಯಕ್ಕೆ ಬಂದಿ ದ್ದೇ ವೆ. ಕಳೆದ ಚುನಾವಣೆಯಲ್ಲೇ ನಾವು ಜನಸೇವಕರೂಂತ ಹೇಳಿಕೊಂಡಿದ್ವಿ - ಮುಂದಿನ ಚುನಾವಣೆಯಲ್ಲಿ ಅದೇ ಮಾತನ್ನ ಹೇಳ್ತೀವಿ. ಮಾತಿಗೆ ತಪ್ಪುವವರು ನಾವಲ್ಲ. ದುರ್ಭಿಕ್ಷದಿಂದ ಜನ ಸಾಯ್ತಿದಾರೇಂತ ಪತ್ರಿಕೆಗಳಲ್ಲಿ ಪ್ರಕಟವಾದರು ನಂಬಬೇಡಿ. ನಮ್ಮ ರಾಮರಾಜ್ಯದಲ್ಲಿ ಯಾರೂ ಹೊಟ್ಟೆಗಿಲ್ಲದೆ