ಪುಟ:ನಾಸ್ತಿಕ ಕೊಟ್ಟ ದೇವರು.pdf/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೧೪

ನಾಸ್ತಿಕ ಕೊಟ್ಟ ದೇವರು

ಸಾಯುವುದಿಲ್ಲ ! ಸಾಯಲು ನಾವು ಸಮ್ಮತಿ ಕೊಡುವುದಿಲ್ಲ ! ಉತ್ತರ ದೇಶದ ರಾಜರು ನಮ್ಮ ಸಹಾಯಕ್ಕೆ ಬಂದಿದ್ದಾರೆ. ನೋಡಿದಿರಾ ರೈಲು? ಇದರಲ್ಲಿ ಅಕ್ಕಿ ಇದೆ. ರೂಪಾಯಿಗೆ ಎರಡು ಸೇರು ! ಎಲ್ಲಿ, ಜಯಘೋಷ ಮಾಡಿ ! ನನ್ನ ಜತೆಯಲ್ಲಿ ಗಟ್ಟಿಯಾಗಿ ಹೇಳಬೇಕು. ನಾನು 'ರೂಪಾಯಿಗೆ' ಅಂದಾಗ ನೀವು 'ಎರಡು ಸೇರು' ಎನ್ನಬೇಕು. ಹೇಳಿ, ರೂಪಾಯಿಗೆ__!'
ಜನಸ್ತೋಮದ ಕಟ್ಟಿಟ್ಟ ಭಾವನೆಗಳ ಕಟ್ಟೆಯೊಡೆದು ಧ್ವನಿ ಕೇಳಿಸಿತು:
'ಎರಡು ಸೇರು !'
ಮಂತ್ರಿವರ್ಯರೆಂದರು:
'ಇನ್ನೊಮ್ಮೆ-ರೂಪಾಯಿಗೆ__!'
ಉತ್ತರ.
ಮತ್ತೂ ಒಮ್ಮೆ,
ಖಾದಿಯಂತೆ ನುಣುಪಾಗಿದ್ದ ಸಣಬಿನ ಚೀಲದಲ್ಲಿ ಹತ್ತು ಸೇರು ಅಕ್ಕಿಯನ್ನು ಧಾಂಡಿಗ ಜವಾನನೊಬ್ಬ ಮಂತ್ರಿವರ್ಯರ ಮುಂದೆ ಹಿಡಿದ. ಮಂತ್ರಿವರ್ಯರು ಆ ಭಾರವನ್ನು ಎತ್ತಲಿಲ್ಲ. ಬೆರಳಲ್ಲೇ ಮುಟ್ಟಿ ಆಹಾರ ಸಚಿವರ ಕಡೆಗೆ ದಾಟಿಸಿದರು. ಆಹಾರ ಸಚಿವರ ಹಸ್ತಸ್ಪರ್ಶದ ಬಳಿಕ ಚೀಲ ಅವರ ಜವಾನನ ಬಳಿ ಸೇರಿತು.
ಅರ್ಚಕರು ರೈಲುಗಾಡಿಯ ಎಂಜಿನಿನ ಕರಿಯ ಮುಖವನ್ನು ಆರತಿಯಿಂದ ಬೆಳಗಿದರು. ಅದರ ಹಣೆಗೆ ಕುಂಕುಮವಿಟ್ಟರು.
ಜಯಘೋಷ ಮೊರೆಯಿತು.
ಭಾವಚಿತ್ರಗಳನ್ನು ತೆಗೆದುಕೊಳ್ಳುವವರು ತಾಮುಂದು ನಾಮುಂದು ಎಂದು ಸೆಣಸಾಡಿದರು. ಮಂತ್ರಿವರ್ಯರು ಬಹಳ ಹೊತ್ತು ಮುಗುಳುನಗುತ್ತಲೇ ಇರಬೇಕಾಯಿತು.
ಗಾರ್ಡ್ ಶೀಟಿಯೂದಿದ, ಹಸುರು ಬಾವುಟ ಬೀಸುತ್ತಾ. ಗಾಡಿ ಶಿಳ್ಳು ಹಾಕಿತು, ಗಗನಕ್ಕೆ ಗುರಿ ಇಟ್ಟು.
ಜುಕು ಜುಕು-ಜೂ . . . ಮೈಲೂರಿನ ಕಡೆಗೆ ರೈಲು, ಎಂಜಿನ್ನು. ಸಂಗ್ರಹ ಸಾಲದೆ ಹೋಗಬಹುದೆಂದು ಒಂದು ಡಬ್ಬಿ ತುಂಬ ಕಲ್ಲಿದ್ದಲು. ಇನ್ನೊಂದು ಡಬ್ಬಿಯಲ್ಲಿ ತಳಿರುತೋರಣದ ಸಾಮಗ್ರಿ-ಬಾಡಿದ ಹಸುರನ್ನು