ಪುಟ:ನಾಸ್ತಿಕ ಕೊಟ್ಟ ದೇವರು.pdf/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅನ್ನದೆವರು ರೈಲು ಪ್ರಯಾಣ

೧೧೫

ಬದಲಾಯಿಸುವುದಕ್ಕೋಸ್ಕರ. ತಿಂಡಿತೀರ್ಥಗಳಿಗೆ ಏರ್ಪಾಟು ಇನ್ನೊಂದರಲ್ಲಿ. ಚಿಲ್ಲರೆ ಅಕ್ಕಿ ತುಂಬಿದ ಡಬ್ಬಿಯೊಂದು. ಉಳಿದ ಹಲವಾರು ಡಬ್ಬಿಗಳು-ಗುಡು ಗುಡು ಗುಡು ಗೂಡ್ಸ್ ಗಾಡಿ- ಅನ್ನ ದೇವರಿಗೆ ಅವು ಮೀಸಲು. ಕೊನೆಯಲ್ಲಿ ಗಾರ್ಡು. ಬಳಿಯಲ್ಲೇ ಸುರುಳಿ ಸುತ್ತಿದ ಬಾವುಟಗಳು. ಕೈಯಲ್ಲಿ ಸುರುಳಿ ಹೊಗೆ ಬಿಡುತ್ತಿದ್ದ ಸಿಗರೇಟು . . .
ಯಾವುದೋ ಹಳೆಯ ಹಾಡಿನ ನೆನಪು ಅವನಿಗೆ:
' ದುನಿಯಾ ರಂಗ್ ರಂಗೇಲಿ ಬಾಬಾ ದುನುಯಾ ರಂಗ್ ರಂಗೇಲಿ.'

****

ಜುಕು ಜುಕು ಜುಕು...
ಸೇತುವೆಗಳ ಮೇಲಿಂದ,ಕ ಣಿವೆಯ ಮಾರ್ಗವಾಗಿ, ಬಯಲುಗಳನ್ನು ಹಾದು, ಬೆಟ್ಟಗಳನ್ನು ಕೊರೆದು ಧಾವಿಸುತ್ತಿತ್ತು. ಲೋಹದೈತ್ಯ, ಹತ್ತಿರದಿಂದ; ದೂರದ ನೋಟಕ್ಕೆ, ಸಾವಿರ ಕಾಲಿನ ಹುಳು.
ಗಾಡಿಗಿಂತ ಮುಂಚೆಯೇ ಸುದ್ದಿ ಹೋಗಿತ್ತು. ಸ್ವಾಗತಕ್ಕೆ ಸಿದ್ದತೆಯಾಗಿತ್ತು. ಎಲ್ಲ ಊರುಗಳಲ್ಲೂ- ಬಾವುಟ - ಘೋಷಣೆ ಜಯಕಾರ. ರೈಲು ಎಲ್ಲಿಯೂ ನಿಲ್ಲದೆಯೇ ಸಾಗಿತು! ಒಂದು ಊರಿನಿಂದ ಇನ್ನೊಂದು ಊರಿಗೆ. ಅಲ್ಲಿಂದ ಬೇರೊಂದು ಊರಿಗೆ. ಎದುರು ಬದಿಯಿಂದ ಬರುತಿದ್ದ ರೈಲುಗಾಡಿಗಳು ಸರಿದು ನಿಂತು 'ಫುಡ್ ಸ್ಪೆಷಲ್ಲಿಗೆ' ಹಾದಿಮಾಡಿ ಕೊಟ್ಟವು. ಅಲ್ಲಲ್ಲಿ ಕಂಬಿ ಸರಿಪಡಿಸುತಿದ್ದ ಕೆಲಸಗಾರರು ದೂರ ಸರಿದು ನಿಂತರು. ಎಮ್ಮೆ ದನಗಳು ಕಂಬಿಯನ್ನು ದಾಟಲಿಲ್ಲ. ಜನ ಗಾಡಿಯನ್ನು ಕಂಡಲ್ಲೆಲ್ಲ ಕೈಬೀಸಿದರು, ಹರ್ಷಧ್ವನಿ ಮಾಡಿದರು, ಸಂತೋಷದಿಂದ ಕುಣಿದರು.
ಆ ಸಂತೋಷದಲ್ಲಿ ಭಾಗಿಗಳಾದ ಮೇಲೂ ಸಂದೇಹಗ್ರಸ್ತರು ಅಲ್ಲಲ್ಲಿ ಕೇಳುವುದಿತ್ತು:
'ಅನ್ನದೇವರು ಯಾವ ಊರಿಗೆ ಹೊರಟಿದ್ದಾರೆ?'
ಉತ್ತರ ಸಿದ್ದವಾಗಿರುತಿತ್ತು:
'ಯಾವ ಊರಿಗೆ? ಅಯ್ಯೋ ಬೆಪ್ಪೆ! ಕಾಣಿಸೋದಿಲ್ವೆ? ಮುಂದಿನ ಊರಿಗೆ!'
ಅಲ್ಲಿಯೂ ಬಲ್ಲವರಿಂದ ಉತ್ತರ ಬಂತು:
'ಅಯ್ಯೋ ಬೆಪ್ಪೆ! ಮುಂದಿನ ಊರಿಗೆ.'