ಪುಟ:ನಾಸ್ತಿಕ ಕೊಟ್ಟ ದೇವರು.pdf/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅನ್ನ ದೇವರ ರೈಲು ಪ್ರಯಾಣ

೧೧೭

ಉತ್ತರವಿರಲಿಲ್ಲ, ಆಕ್ಷೀಣ ಧ್ವನಿಯ ಪ್ರಶ್ನೆಗೆ.
ಚಿಲ್ಲರೆ ಅಕ್ಕಿಯನ್ನಿರಿಸಿದ್ದ ಡಬ್ಬಿಯಿಂದ ಬಲಿತ ಹೆಗ್ಗಣಗಳೆರಡು ಎದುರು ಮಗ್ಗುಲಿನಿಂದ ಕೆಳಕ್ಕೆ ಹಾರಿ ಊರು ಸೇರಿದುವು.

****

'ಫುಡ್ ಸ್ಪೆಷಲ್ಲು' ಕಿಷ್ಕಿಂಧೆಯನ್ನು ಸುತ್ತಿ ದಿನಗಳು ಕಳೆದುವು.
ಶೆಟ್ಟರು ಎಂದಿನಂತೆ ಹೇಳಿದರು:
'ಅಕ್ಕಿ ಇದೆ. ಒಳ್ಳೇ ಅಕ್ಕಿ. ರೂಪಾಯಿಗೆ ಒಂದೂ ಕಾಲು ಸೇರು ಇಡೀ ಪಲ್ಲ ತಗೊಳೋದಾದರೆ___'
ಗಿರಾಕಿಗಳು ಮೆಲು ದನಿಯಲ್ಲಿ ಅಂದರು:
___'ಪತ್ರಿಕೆಗಳಲ್ಲಿ ಬಂದಿದೇ '...
___'ರೂಪಾಯಿಗೆ ಎರಡು ಸೇರಂತೇ.'
___'ಮಂತ್ರಿಗಳು ಹೇಳಿದಾರಂತೆ ಕಣ್ರೀ.'
ಶೆಟ್ಟರು ಆಗಲೂ ಶಾಂತ ಚಿತ್ತರಾಗಿಯೇ ಇದ್ದರು:
' ನಾವೇನ್ರಿ ಮಾಡೋದು ? ಮಂಡಿಯಿಂದ ಇಷ್ಟಕ್ಕೆ ತಂದಿದೀವಿ. ಗಾಡಿ ಖರ್ಚು ಇಷ್ಟು. ನಮಗೆ ಮಾರ್ಜಿನು ಎಷ್ಟಪ್ಪಾ? ನೀವೇ ಲೆಕ್ಕ ಹಾಕಿ ನೋಡಿ.'
' ಏನಾಯಿತ್ರೀ ಹಾಗಾದ್ರೆ ರೈಲ್ನಲ್ಲಿ ಬಂದಿದ್ದು?'
' ಬಂದಿತ್ತೆ?'
' ಏನು ಹಾಗಂದ್ರೆ? ನಾನು ಕಣ್ಣಾರೆ ನೋಡಿದೀನಿ.'
' ಏನನ್ನ?'
' ರೈಲನ್ನ.'
' ಸರಿ ಮತ್ತೆ ! ರೈಲಿದೆ !'
' ಅನ್ನ ದೇವರು?'
ಶೆಟ್ಟರ ಬದಲು ಗಿರಾಕಿಗಳಲ್ಲೇ ಒಬ್ಬ ಉತ್ತರವಿತ್ತ:
' ಅನ್ನ ದೇವರೆ ? ಎಲ್ಲಾ ದೇವರ ಹಾಗೆಯೇ. ಎಲ್ಲಾ ಕಡೇಲೂ ಇರೋದು ನಿಜ. ಎಲ್ಲಿಯೂ ಕಾಣಿಸೋದಿಲ್ಲ, ಅದೂ ನಿಜ !'