ಪುಟ:ನಾಸ್ತಿಕ ಕೊಟ್ಟ ದೇವರು.pdf/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಆ ಕಾಳ ರಾತ್ರಿ

೧೧೯

ಹಾಸಿಗೆ ಹಿಡೀತು. ಏನೋ ನಿಶ್ಯಕ್ತಿ ವಾಸಿಯಾಗುತ್ತೆ ಅಂತ ಇದ್ದರೆ, ಹಾಳು ಶನಿ ಹೀಗೂ ವಕ್ರಿಸಬೇಕೇ... ಏನೇನು ಔಷಧಿ ಕುಡಿದ್ನೋ ಈ ಜನ್ಮದಲ್ಲಿ... ಏನೇನು ಔಷಧೀನೋ... ಆ ಭಗವಂತನಿಗೇ ಗೊತ್ತು...
...ಕ್ಯಾಷುವಲ್ ಲೀವ್, ಪ್ರಿವಿಲೇಜ್ ಲೀವ್ ಎಲ್ಲ ಮುಗಿದ್ಹೋಗಿತ್ತು... ಈಗ ಲೀವ್ ವಿತೌಟ್ ಪೇ... ಸಾಲದ್ದಕ್ಕೆ ನಮ್ಮ ಬಾಲೂ ಎಸ್. ಎಸ್. ಎಲ್. ಸಿ. ಪರೀಕ್ಷೆ ಕಟ್ಟಿದ್ದ... ತುಂಬ ದಿಗಿಲು... ನೆನ್ನೆ ತಾನೇ ಮೈಸೂರಿಗೆ ಹೋದ... ಅವನ ಚಿಕ್ಕಪ್ಪ ಬಾಂತ ಬರೆದಿದ್ದ. ಏನಾದರೂ ಕೆಲಸ ನೋಡಬಹುದೂಂತ... ಕಮಲಿ ಮದುವೆ... ಈ ವರ್ಷಾನಾದರೂ ಮಾಡಬೇಡ್ವೆ? ವಿದ್ಯಾಭ್ಯಾಸಾನೋ ನಾಲ್ಕನೇ ಫಾರಂನಲ್ಲೇ ನಿಂತುಬಿಡ್ತು. ಬಾಲೂಗೆ ತಾನೆ ವಿದ್ಯೆ ಬೇಕಾದ್ದು?...ಆದರೆ ಈಗನ ಹುಡುಗರಿಗೆ ಇಂಟರ್ ಮೀಡಿಯೆಟ್ ಓದಿರೋ ಹುಡುಗೀರೇಬೇಕಂತೆ...
... ಎಲ್ಲೀ ಕಮಲೂ ? ಕೊಂಚ ಬೀದಿಗೆ ಹೋಗ್ಬಿಟ್ಟು ಬಾರಮ್ಮಾ, ಡಾಕ್ಟ್ರು ಬಂದ್ರೇನೋ...
... ಚಿನ್ನದಂಥ ಹುಡುಗಿ ರಾಯರೇ... ಒಬ್ಬಳೇನೇ ದೇವ್ರು: ಕೊಟ್ಟಿರೋದು... ಆಕೇನ ಒಳ್ಳೇ ಗಂಡನ ಮನೇಗೆ ಕಳಿಸೋಕೆ ಆಗದೆಹೋಯಿತೇ...
... ಈ ವರ್ಷ ಹೇಗಾದರೂ ಮದುವೆ ಮುಗಿಸಿ ಬಿಡಬೇಕೂಂತಿದ್ದೆ. ವರದಕ್ಷಿಣೆಗೇ೦ತ ಒಂದು ಸಾವಿರ ಸಾಲಾನೂ ಮಾಡೋಣಾಂತಿದ್ದೆ
... ಮುಂದಿನ ವರ್ಷ ಬಾಲೂಗೆ ಎಲ್ಲಿಂದಾದರೂ ಹುಡುಗೀನ ತಂದು ಆ ಸಾಲ ತೀರಿಸೋದು... ಆದರೆ ಏರ್ಪಾಟುಮಾಡೋಣ ಅನ್ನೋದ್ರಲ್ಲೇ ಬಂತು ಈ ಕಾಯಿಲೇ...
... ನೀವು ಚೆನ್ನಾಗಿದ್ದೀರಾ? ಮನೇಲಿ ಎಲ್ಲರೂ... ಅ೦ತೂ ಸುಖವಾಗಿರೀಪ್ಪಾ... ಇಲ್ಲಿ ನಾನು ಹುಷಾರಾಗ್ತೀನಿ... ಇನ್ನೇನು ನಾಲ್ಕು ದಿನ... ಎದ್ಬಿಡ್ತೀನಿ... ಯುಗಾದಿ ಹೊತ್ತಿಗೆ ಅನಂತಯ್ಯ ಓಡಾಡದೆ ಇರೋಕಾಗುತ್ಯೆ? ಯಾವ ವಾರಾನೋ ಯುಗಾದಿ... ಹೂಂ. ಶನಿವಾರವಂತೆ... ಬನ್ನೀಪ್ಪಾ... ಊಟಕ್ಕಲ್ದೆ ಹೋದ್ರೂನೂ... ಹಾಗೇ ಬಂದ್ಬಿಟ್ಟು ಹೋಗಿ...