ಪುಟ:ನಾಸ್ತಿಕ ಕೊಟ್ಟ ದೇವರು.pdf/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಆ ಕಾಳ ರಾತ್ರಿ

೧೨೩

ಬಾಯ್ತೆರೆಯುತಿದ್ದರು. ಸ್ವರ ಬರುತ್ತಿರಲಿಲ್ಲ. ಗಂಟಲಷ್ಟೇ ಗರಗರ ಎನ್ನುತ್ತಿತ್ತು.
ನನ್ನನ್ನು ನೋಡಿದ ತಾಯಿ ಮಕ್ಕಳು ಗೊಳೋ ಎಂದು ಅಳತೊಡಗಿದರು.
ಯುಗಾದಿ ಆ ದಿನ. ನನ್ನ ಉಡುಗೊರೆಗಳು ಯಾರಿಗೆ ಬೇಕಿದ್ದುವು ? 'ಅಳಬೇಡಿ, ಅಳಬೇಡಿ ಏನೂ ಆಗೊಲ್ಲ' ಎಂದು ಸಂತೈಸಿದೆ. ಆದರೆ ನನ್ನ ಮನಸ್ಸು ಮಾತ್ರ ಗಾಬರಿಗೊಂಡಿತ್ತು.
ಹೊರಟು ಬರುವಂತೆ ಬಾಲೂಗೆ ಆಗಲೇ ತಂತಿ ಕಳಿಸುವುದಾಗಿ ಹೇಳಿದೆ. 'ನಾಣಿ, ಬಾ ನಮ್ಮಲ್ಲಿಗೆ ಹೊಗೋಣ' ಎಂದೆ. ರುಕ್ಮಿಣಮ್ಮನೂ 'ಅಣ್ಣನ ಜೊತೆಯಲ್ಲಿ ಹೋಗಪ್ಪ' ಎಂದರು. ಆತ ಕೊಟ್ಟ ಉತ್ತರ ಒಂದೇ : " ಊಹೂಂ. ಅಪ್ಪಯ್ಯನ್ನ ಬಿಟ್ಟು ಹೋಗೊಲ್ಲ."
ಆದರೆ ಅಪ್ಪಯ್ಯ ಅವರೆಲ್ಲರನ್ನೂ ಬಿಟ್ಟು___
ಮರುದಿನ ಮಧ್ಯಾಹ್ನ ಪುನಃ ಆಸ್ಪತ್ರೆಗೆ ಹೋದೆ. . . ಬೆಡ್ ಖಾಲಿಯಾಗಿತ್ತು. ಡಾಕ್ಟರ್ ಮಾಧೂರಾವ್ ಸಮೀಪ ಬಂದು ಹೆಗಲ ಮೇಲೆ ಕೈಯಿರಿಸಿ "ರಾವ್, ಅವರು ನಿಮ್ಮ ಸಂಬಂಧಿಕರೆ?" ಎಂದು ಕೇಳಿದರು
"ಅಲ್ಲ ಸ್ನೇಹಿತರು " ಎಂದೆ ನಾನು.
"ಓ . . ." ಎನ್ನುತ್ತ ಅವರು ವಿವರಿಸಿದರು.

ಡಾಕ್ಟರ್ ಮಾಧೂರಾವ್

ಒಂದು ಗಂಟೆಯ ಹಿಂದೆ ಆ ಬಡಪಾಯಿ ಕಣ್ಣುಮುಚ್ಚಿಕೊಂಡ. ಕಳೆದ ರತ್ರಿಯೊಂದು ಭೀಕರ ರಾತ್ರೆ ಮಿಸ್ಟರ್ ಇವರೇ ; ಭೀಕರ. ನನ್ನ ಕಣ್ಣು ನೋಡಿದಿರಾ ? ಎಷ್ಟು ಕೆಂಪಾಗಿದೆ ! ರೆಪ್ಪೆ ಮುಚ್ಚದೆ ರಾತ್ರೆ ಇಡೀ ಸೀನಿಯರ್ ಫಿಸಿಶಿಯನ್, ನಾನು ಮತ್ತು ಇನ್ನೊಬ್ಬರು, ಆ ರೋಗಿ,ಸಾವಿನೊಡನೆ ಹೋರಾಡಿದೆವು. . . ನ್ಯುಮೋನಿಯಾ ರಿಲಾಪ್ಸ್ ಆಗಿ, ಬಂದಿತ್ತು ಡಬ್ಬಲ್ ನ್ಯುಮೋನಿಯಾ . . . ಪ್ಲಾಸ್ಟರ್ ಹಾಕಿದೆವು ; ಪೆನ್ಸಿಲಿನ್ ಇಂಜೆಕ್ಷನ್ ಕೊಟ್ಟೆವು. ಗ್ಲೂಕೋಸ್ ಇಂಜೆಕ್ಷನ್ ಕೂಡಾ. . .ಆಮೇಲೆ ಬ್ಲಡ್ ಟ್ರಾನ್ ಪ್ಯೂಷನ್. ಎಂಥ ಕೇಸು ! ಎಂಥ ನೋವು ! ವೇದನೆ . . . ಏನೇನು ಆಸೆಗಳಿದ್ದವೋ ಆ ಜೀವಕ್ಕೆ ; ಎಷ್ಟು ಚಡಪಡಿಸ್ತು.