ಪುಟ:ನಾಸ್ತಿಕ ಕೊಟ್ಟ ದೇವರು.pdf/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನ೦. ೨೦೮ ಮತ್ತು ನೀಲಿ ಬುಶ್ ಕೋಟು

೧೪೧

ಇತ್ತು. ಸೂಜಿ-ದಾರ ಒಳ ಹೊರಗೆ ಹೋಗಿ ಬರುತ್ತಲೇ ಇತ್ತು.
ಆದರೆ, ಹೃದಯವನ್ನೇ ಹೊಕ್ಕು ಒಳ ಹೋಗಿ ಬರುತ್ತಿದ್ದ, ಸೂಜಿ ಚುಚ್ಚಿದಂತೆ ನೋಯಿಸುತ್ತಲಿದ್ದ, ಆ ವಿಚಾರಗಳೋ . . .
ಆಗದೆ ಉಳಿದು ಹೋದ ತನ್ನ ಮದುವೆ . . . ಹಾಗೆ ಕೆಲಸಕ್ಕೆ ಹೋಗುವುದರಿಂದ ತನಗಾಗಿ ಬರುವ ವರಗಿರಾಕಿಗಳು ಕಡಮೆಯಾಗುವ ಸಂಭವ. ಹೋಗದೆ ಇದ್ದರೊ ? ಉಪವಾಸದ ಭೀತಿ . . .
ತನ್ನ ಸುತ್ತುಮುತ್ತಲೂ ಕುಳಿತಿದ್ಧ ಸಂಗಾತಿಗಳು . . . ಒಬ್ಬೊಬ್ಬರದೂ ಒಂದೊಂದು ಕಥೆ. ಒಡೆದ ನೌಕೆಯ, ಭಗ್ನಮಂದಿರದ, ನೀಚ ಜೀವನದ, ಆತ್ಮಹತ್ಯೆಯ ಆಲೋಚನೆಗಳ, ಕುಟುಂಬ ಘೋಷಣೆಯ ವಿಧವಿಧದ ಕತೆಗಳು.
'ತಯಾರಿ ಘೋಷಾಕಿ'ನ ಆ ಕಾರಖಾನೆಯಲ್ಲಿ ಹಿಂದೆ ಸಾವಿರ ಜನ ದುಡಿಯುತ್ತಿದ್ದರಂತೆ. ಈಗ ಮುನ್ನೂರೂ ಇಲ್ಲ. ಕಳೆದ ತಿಂಗಳಷ್ಟೇ ಎಂಟು ನೂರು ಜನರನ್ನು ವಜಾ ಮಾಡಿದ್ದರಂತೆ. ಆಮೇಲೆ ನೂರು ಜನ ಹೊಸಬರನ್ನು ಕಡಮೆ ಸಂಬಳದ ಮೇಲೆ ಕೆಲಸಕ್ಕೆ ಸೇರಿಸಿಕೊಂಡರಂತೆ. ಶಾರದೆಗೆ ಕೆಲಸ ಸಿಕ್ಕಿದ್ದು ಹಾಗೆ. ಯಾರದೋ ಒಂದು ತುತ್ತನ್ನು ಕಸಿದು . . .
ತುತ್ತು ಅನ್ನಕ್ಕೆ ಹಾದಿಯಾಯಿತು—ಬದುಕಲು ಅಗತ್ಯವಾದ ತುತ್ತು ಅನ್ನ.
ಆದರೆ ತನ್ನ ತಮ್ಮನಿಗೊಂದು ಬುಶ್ ಕೋಟು? ಇದು ಎಂಥ ಬಗೆ ಹರಿಯದ ಸಮಸ್ಯೆ!
ಮತ್ತೆ ಯೋಚನೆಗಳು . . . ಎಷ್ಟು ಸುತ್ತುವರಿದರೂ ಆ ಬಿಂದುವಿಗೇ ಬಂದು ತಲಪುವ ಯೋಚನೆಗಳು . . .
ಯೋಚನೆಗಳೆಲ್ಲ ಹೆಪ್ಪುಗಟ್ಟಿ ಮುಖ ಸಿಂಡರಿಸಿಕೊಂಡು ಕಪ್ಪಿಟ್ಟಿತು.

****

ವಿರಾಮ ವೇಳೆಯಲ್ಲಿ 'ಬುತ್ತಿ'ಗಳನ್ನೆತ್ತಿಕೊಂಡು ಎಲ್ಲರೂ ಕ್ಯಾಂಟೀನಿನ ಪಕ್ಕದಲ್ಲಿದ್ದ ವಠಾರಕ್ಕೆ ಹೋದರು . . .
ಸಾರು—ಮಜ್ಜಿಗೆಯಲ್ಲಿ ಕಲಸಿದ್ದ ಎರಡು ತುತ್ತು ಅನ್ನವನ್ನು ಗಬ ಗಬನೆ ನುಂಗಿ, ಕೊಳಾಯಿಯಿಂದ ನೀರನ್ನು ಕುಡಿದು, ಹೊಲಿಗೆಯ