ಪುಟ:ನಾಸ್ತಿಕ ಕೊಟ್ಟ ದೇವರು.pdf/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಡಿ ಲಕ್ಸ್

೧೫೫

ಭಕ್ಷೀಸೇನೋ ಸಿಗಬಹುದು. ಆದರೆ ಈ ಮಹಾರಾಯಿತಿಯೊಡನೆ, ಲೆಕ್ಕ
ಸರಿ ತಪ್ಪು ಎಂದು ವಾದಿಸುವವರು ಯಾರು ? ನಡುವೆ ಕಣ್ಣು ತಪ್ಪಿಸಿ
ಇಳಿದು ಹೋದರಂತೂ ತನಗೆ ಕ್ಷೌರವೇ ! ಒಮ್ಮೆ ಕೆನ್ನೆ ಕೆತ್ತಿಸಿಕೊಂಡಿದ್ದ
ರಾಮನ್ ಗೆ ಅಂತಹ ಕ್ಷೌರದ ಸವಿ ಚೆನ್ನಾಗಿ ಗೊತ್ತಿತ್ತು.
ಹೊಸ ಹೊಸ ಗಿರಾಕಿಗಳು. ಸಿಗಾರ್ ಹಚ್ಚಿದ್ದ ಬೊಕ್ಕ ತಲೆಯವ
ನೊಬ್ಬ. ಭಾರತ ದರ್ಶನಕ್ಕೆಂದು ಹೊರಟಿದ್ದ ಅಮೇರಿಕನ್ ದಂಪತಿ
ಗಳಿಬ್ಬರು. ಒಂಟಿಯಾಗಿಯೇ ಪ್ರವಾಸ ಬೆಳಸುತ್ತಿದ್ದ ವಿದ್ಯಾರ್ಥಿನಿ ಒಬ್ಬಾಕೆ.
ಆಗ್ರಾ ಗ್ವಾಲಿಯರ್ ವರೆಗಿನ ಪ್ರಯಾಣಿಕರು ಕೆಲವರು. ತಲೆಯಲ್ಲಿ ಪುಟ್ಟ
ಚಂಡಿಕೆ ಇರಿಸಿ ಸೂಟು ಧರಿಸಿದವನೊಬ್ಬ.
ಕೊನೆಯ ಆ ಮನುಷ್ಯ, ಕೈತುಪಾಕಿಯ ಗುಂಡುಗಳಂತೆ ವಟವಟ
ಮಾತು ನಡಸಿದ್ದ:
" ಏರ್ ಸರ್ವೀಸಿನ ಹಾಗೆ. ಈ ಗಾಡೀಲಿ ರಾತ್ರಿ ಕೂತೇ ಇರೋದು
ಬಹಳ ಕಷ್ಟ. ಮಂತ್ರಿಯವರನ್ನು ಭೇಟಿ ಮಾಡಿ ನಾನು ಮಾತಾಡ್ಬೇಕು."
. . . ದೀಪಗಳು ಹತ್ತಿಕೊಂಡುವು. ಹೊರಗಿನ ಮಬ್ಬುಗತ್ತಲೆಯನ್ನೇ
ದಿಟ್ಟಿಸುತ್ತ ರಾಮನ್ ನಿಂತ. ಆತನ ಕೆಲಸವಿನ್ನೂ ಖಾಯಂ ಆಗಿರಲಿಲ್ಲ.
ಊರಿನಿಂದ ಕಾಗದ ಬಂದಿತ್ತು : ' ವರ್ಷಕ್ಕೊಮ್ಮೆಯಾದರೂ ಬಂದು
ಹೋಗಬಾರದೇನು? ನಿನ್ನ ತಾಯಿಗೆ ಕಾಹಿಲೆ, ತಂಗಿಗೆ ಮದುವೆ ಗೊತ್ತಾಗಿ
ರಜಾ ಪಡೆದು ಇದ್ದಷ್ಟು ಹಣ ತಗೊಂಡು ಬಾ. . .' ರಜಾ ಸಿಗುವಂತಿರ
ಲಿಲ್ಲ. ಹಣವನ್ನೇನ್ನೋ ಕಳಿಸಬೇಕು; ಈ ತಿಂಗಳ ವೇತನ ಕೈಗೆ ಬಿದ್ದೊಡನೆ
ಆದಷ್ಟನ್ನು ಕಳಿಸಬೇಕು. . .
ಯಾರೋ ಬಂದು ಕುಳಿತು ಕೆಮ್ಮಿದಂತಾಯಿತು. ತನ್ನ ಗಮನ ಸೆಳೆದ
ಒಣ ಕೆಮ್ಮು. ಮುಗುಳುನಗೆ ಜತೆಗೆ.
"ಊಟ ತಯಾರಿದೆಯೇನು?"
ಇಂಗ್ಲಿಷಿನಲ್ಲಿ ಬಂದ ಪ್ರಶ್ನೆಗೆ ಇಂಗ್ಲಿಷಿನಲ್ಲೇ ಹೌದೆಂದು ಉತ್ತರ .
ಮತ್ತೆ ಮುಂದೆ—ತಾನೇ—
" ಮಾಂಸಾಹಾರವೋ? ಶಾಕಾಹಾರವೋ?"
ಉತ್ತರದ ಜತೆ—
". . . ಚಪಾತಿ ಮತ್ತು ಅನ್ನ".