ಪುಟ:ನಾಸ್ತಿಕ ಕೊಟ್ಟ ದೇವರು.pdf/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೭೦

ಮೇಲ್ನುಡಿ

ನಮ್ಮನ್ನು ಕೇಳುವ ಪ್ರಶ್ನೆ. ನಾವು, ನಮ್ಮ ಸಮಾಜ ಈ ಪ್ರಶ್ನೆಗೆ ಉತ್ತರಿಸ
ಲಾರೆವು-ಮಾತನಾಡಲೇ ಬೇಕಾದರೆ ಬೈಯುತ್ತೇವೆ -"ಷಂಡ, ನಾಸ್ತಿಕ."
"ಅನ್ನಪೂರ್ಣೆ ಒಳಗಣ್ಣಿನಿಂದ ತನ್ನ ಆ ಮಕ್ಕಳನ್ನು ನೋಡಿ ನಗುತ್ತಿದ್ದಂತೆ
ತೋರಿತು" ಎಂಬ ಕಥೆಗಾರರ ಮಾತು ಎಷ್ಟು ಅರ್ಥಪೂರ್ಣವಾಗಿದೆ!

ಅನ್ನದೇವರ ರೈಲು ಪ್ರಮಾಣ
"ಅನ್ನದೇವರು ಎಲ್ಲ ದೇವರ ಹಾಗೆ ಎಲ್ಲ ಕಡೆಯಲ್ಲೂ ಇದಾರೆ. ಆದರೂ
ಯಾರಿಗೂ ಕಾಣಿಸುವುದಿಲ್ಲ" ಎಂಬುದು ಈ ಕಥೆಯ ಸಿದ್ಧಾಂತ. ಸದ್ಯದ
ಪರಿಸ್ಥಿತಿಗೂ ಚೆನ್ನಾಗಿ ಹೊಂದಿಕೊಳ್ಳುವ ಈ ಕಥೆ ಬರಹಕ್ಕೆ ಇಳಿ
ದದ್ದು ಸುಮಾರು ಹತ್ತು ವರ್ಷಗಳ ಹಿಂದೆ. ಪ್ರಚಾರವೇ ಸರ್ವಸಮಸ್ಯೆ
ಗಳ ಪರಿಹಾರ ಸಾಧನವಾಗಿರುವ ಈ ಕಾಲದಲ್ಲಿ ಅಧಿಕಾರ ಹೇಗೆ ಜನರ
ಕಣ್ಣಿಗೆ ಮಣ್ಣೆರಚಬಹುದೆಂಬುದು ಇಲ್ಲಿ ಸೂಚಿತವಾಗಿರುವ ವಿಷಯ.
ಜನ ನೋಡುವುದು ರೈಲನ್ನಷ್ಟೆ--ಅಕ್ಕಿಯನ್ನಲ್ಲ. 'ಜೈ' ಕಾರ ಹೇಳಿಸು
ವವರು ಅಧಿಕಾರ ಗರ್ವಿತರು. ಯಾವ ಊರಿನಲ್ಲಿಯೂ ಅಕ್ಕಿಯ ಮೂಟಿ
ಯನ್ನಿಳಿಸದೆ ಕೊನೆಯ ಊರು ಸೇರಿದಾಗ ಅಕ್ಕಿಯನ್ನು ಕಾಣಲು ಬಂದವ
ರಿಗೆ ದೊರಕುವ ಉತ್ತರ “ಎಷ್ಟೊಂದು ಊರು ದಾಟಿಬಂದಿರೋದು!
ಏನ್ಕಥೆ! ?"
ಉತ್ಸವ, ಸಮಾರಂಭ, ಭಾಷಣ, ಜಯಕಾರ, ಪ್ರಚಾರ, ಪ್ರಕಟಣೆ
ಗಳನ್ನೇ ತಿಂದು ಬದುಕುವುದು ಸಾಧ್ಯವಾದರೆ ನಮ್ಮ ದೇಶದಲ್ಲಿ ಅಜೀರ್ಣ
ವಾಗಬೇಕಾಗಿದೆ--ಯಾರಿಗೂ ಹಸಿವಂತೂ ಇರದು.

ಆ ಕಾಳರಾತ್ರಿ

ಒಂದು ಸಂಸಾರದ ಕಷ್ಟ ಸಮಯದ ಕಥೆಯಾದ ಈ ಬರೆಹದಲ್ಲಿ
"ಪೂರ್ವಸ್ಮರಣ" ತಂತ್ರದಲ್ಲಿ ಆ ಸಂಸಾರದ ಅನೇಕ ವರ್ಷಗಳ ಜೀವನ
ಮೂಡುತ್ತದೆ. ಒಂದೊಂದು ಮಾತು ಒಂದೊಂದು ಸನ್ನಿವೇಶವನ್ನೆ
ಚಿತ್ರಿಸಿ ಒಂದು ಸ್ಪಷ್ಟ ಸ್ವರೂಪ ನಿರ್ಮಾಣಗೊಳ್ಳುತ್ತದೆ. "ಯುದ್ಧ ವರ್ಷ
ಗಳ ಆಹಾರಾಭಾವ, ರೋಗರುಜಿನ, ನೋವು ಸಾವು” ಇವುಗಳ ತುಳಿತಕ್ಕೆ
ಸಿಕ್ಕಿದ ಒಂದು ಕುಟುಂಬದ ಕಥೆ--ಇನ್ನೆಷ್ಟು ಕುಟುಂಬಗಳ ಮೇಲೆ ಈ
ಸನ್ನಿವೇಶದ ಪ್ರಭಾವವೋ ಹೇಳುವವರಾರು? ಈ ಕಥೆಯ ಪರಿಣಾಮ.
ಓದುಗನ ಮೇಲೆ ಅಗಾಧವಾಗಿದ್ದರೆ ಆಶ್ಚರ್ಯವೇಕೆ?