ಪುಟ:ನಾಸ್ತಿಕ ಕೊಟ್ಟ ದೇವರು.pdf/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೬

ನಾಸ್ತಿಕ ಕೊಟ್ಟ ದೇವರು

ಒರಟು ಜೀವನ, ನಗೆಮಾತು, ಶಿಸ್ತು . . . ಇವೆಲ್ಲ ಗುಲ್ಡುವಿನ ಒಂದಂಶವಾದುವು. ಹಳ್ಳಿಯಲ್ಲಿ ಚಡಪಡಿಸುತ್ತಿದ್ದ ಮೀನು ಕೊನೆಗೊಮ್ಮೆ ಆಳದನೀರಿಗಿಳಿದಂತಾಗಿತ್ತು.
ದೇಶದ ನಾನಾ ಕಡೆಗಳಿಂದ ಆಯ್ದ ಸೈನಿಕರ ತುಕಡಿಯೊಂದನ್ನು ರಚಿಸಿದ್ದರು. ಹರಕು ಮುರುಕು ಹಿಂದಿ ಭಾಷೆಯ ಕುದುರೆಯನ್ನೇರಿ ನೂರಾರು ಮನಸುಗಳ ಕೋಟೆಗಳಿಗೆ ಗುಲ್ಡು ಲಗ್ಗೆ ಇಟ್ಟ.
ಪರಕೀಯರು ಈ ನಾಡಿನಮೇಲೆ ದುರಾಕ್ರಮಣ ನಡೆಸಿದಾಗ ಹೋರಾಡುವ ಅವಕಾಶ ದೊರೆಯಿತು ಗುಲ್ಡುವಿಗೆ.

***


ಹೋರಾಟದ ಬಳಿಕ ಈಗ ವೀರನಿಗೆ ಒಂದು ತಿಂಗಳ ರಜಾ
ಮೇಜರ್ ಅಂದರು :
"ನಿನ್ನ ವಿಷಯದಲ್ಲಿ ನನಗೆ ಹೆಮ್ಮೆ. ದೇಶದ ಎಲ್ಲಾ ಪತ್ರಿಕೆಗಳು ನಿನ್ನ ಸಾಹಸವನ್ನು ಕೊಂಡಾಡಿವೆ. ಡೆಕರೇಶನ್‌ಗೆ ನಿನ್ನ ಹೆಸರು ರೆಕಮೆ೦ಡ್ ಮಾಡ್ತೀನಿ. ಒಂದು ತಿಂಗಳ ಲೀವ್. ಊರಿಗೆ ಹೋಗಿ ಬಾ."
ಗುಲ್ಡು ಹಿಮ್ಮಡಿಗಳನ್ನು ತಾಕಿಸಿ ಸೆಲ್ಯೂಟ್ ಕೊಟ್ಟ.
ಮೇಜರ್ ಮತ್ತೂ ಅಂದರು:
"ಈ ಚೀಣೀ ಲೈಟ್ ಮೆಷಿನ್‌ಗನ್-ಇದು ನಿನಗೆ!”
ಸೆಲ್ಯೂಟಿನ ಭಂಗಿಯಲ್ಲಿ ನಿಂತಿದ್ದ ಗುಲ್ಡುವಿನ ತುಟಿಗಳು ಮಾನವಾಗಿ ಅಲುಗಿದುವು. ಬೆರಳುಗಳು ಅರೆ ಕ್ಷಣ ಕಂಪಿಸಿದುವು.
ಕರ್ನಾಯಿಲ್ ಸಿಂಗ್, ತನ್ನ ಬಂಧುವನ್ನು ಬೀಳ್ಕೊಡಲೆಂದು ಬಂದ. ಮೆಷಿನ್ ಗನ್ ಹೊತ್ತು ಹೊರಟ ಗುಲ್ಡುವಿಗೆ ಅದೆಷ್ಟೊಂದು ಕೈಗಳು ಚಾಚಿ ಬೀಸಿ ಬೀಸಿ ವಿದಾಯ ನುಡಿದುವು! ಅವನನ್ನು ಹಿಂಬಾಲಿಸಿಯೂ ಅದೆಷ್ಟು ಜನ ಬಂದರು!
ಗುಲ್ಡುವಿನ ಕಣ್ಣಗಳಲ್ಲಿ ಹನಿ ಆಡಿತು.
"ಯಾಕೆ ಬೇಟಾ ?”
"ಊರಿಗೆ ಹೋಗೋಕೆ ಮನಸ್ಸಿಲ್ಲ, ಕರ್ನಾಯಿಲ್ ಭಾಯಿ.”