ಪುಟ:ನಾಸ್ತಿಕ ಕೊಟ್ಟ ದೇವರು.pdf/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೬

ನಾಸ್ತಿಕ ಕೊಟ್ಟ ದೇವರು

ಆ ಸಾರೆ, ತನ್ನ ಮೊದಲ ಬೀಬಿಯ ಹೆರಿಗೆಯ ವೇಳೆ, ಸೂಲಗಿತ್ತಿ ಇರಲಿಲ್ಲ.
ತಳವೇ ಇಲ್ಲವೇನೋ ಎನ್ನುವಂತಹ ಆಳದಿಂದ ಇಣಿಕಿ ನೋಡುತಿತ್ತು ನೋವಿನ ಆ ನೆನಪು.
"ಈಗ ಯಾಕೆ ಆ ಇಚಾರ . . ."
ಇದಕ್ಕಿಂತಲೂ ಹಿಂದಕ್ಕೆ ಸರಿಯಿತು ಸ್ಮರಣೆ.
ತಂದೆಯನ್ನು ಕಳೆದುಕೊಂಡಿದ್ದರೂ ಬಾಲ್ಯ ಸುಖಕರವಾಗಿಯೇ ಇತ್ತು, ಸೋದರಮಾವ ನೀಡಿದ ಆಶ್ರಯದ ನೆರವಿನಿ೦ದ.
ಆ ಮಾವನೂ ಹಮಾಲ. ರೈಲ್ವೆ ಸ್ಟೇಷನ್ನಿನ ಮುಕದರ್ಶನ ಏಳು ಎಂಟರ ಹರೆಯದವನಾಗಿದ್ದಾಗಲೇ ತನಗೆ ಆಗಿತ್ತು. ಪ್ರತಿಯೊಂದು ಗಾಡಿ ಯನ್ನೂ ಇದಿರು ನೋಡುತ್ತ ತಾನು ಕಳೆಯುತ್ತಿದ್ದ ಆ ದಿನಗಳು ...
ಧಡ ಧಡಾಲ್ !
[ಸಿಡಿಮದ್ದು ಕಲ್ಲುಬಂಡೆಗಳನ್ನು ಒಡೆದಂತಹ, ಬೆಟ್ಟದೊಂದು ತುಣಕು ಜಾರಿ ಪ್ರಪಾತಕ್ಕೆ ಬಿದ್ದಂತಹ, ಸಹಸ್ರ ತೋಫುಗಳು ಏಕಕಾಲದಲ್ಲೇ ಗುಂಡಿನ ಮಳೆಗರೆದಂತಹ–ಸದ್ದು.]
"ಆಕ್ಸಿಡೆಂಟ್!"
ಇಮಾಮ್ ಸಾಬಿ ಹೌಹಾರಿ ಬೊಬ್ಬಿಟ್ಟ:
"ಆಕ್ಸಿಡೆಂಟ್!"
ಬೆಂಕಿ ಬಿದ್ದ ಮನೆಯ ಎದುರು ಆರ್ತನಾದ ಮಾಡುವ ಎಳೆಯ ಬಾಲಕನಂತೆ ಅರಚುತ್ತ ಇಮಾಮ್ ಸಾಬಿ, ನಿಲ್ದಾಣದ ಹೆಬ್ಬಾಗಿಲಿನತ್ತ ಧಾವಿಸಿದ.
ಓಡುತ್ತ, ಏದುಸಿರು ಬಿಡುತ್ತ, ಆತ ಕೂಗಿ ಕೇಳಿದ:
“ಎల్లి ? ಏನಾಯ್ತು ?"
ಧ್ವನಿಯನ್ನು ಕೇಳಿ, ತಮ್ಮ ಕೊಠಡಿಯಿಂದ ಹೊರಬಂದ ಸ್ಟೇಶನ್ ಮಾಸ್ತರು, ಓಡಿ ಬರುತ್ತಲಿದ್ದ ಇಮಾಮ್ ಸಾಬಿಯನ್ನು ತಡೆಯುತ್ತ ಅ೦ದರು :
“ಯಾಕಪ್ಪ? ಏನಿದು ? "