ಪುಟ:ನಾಸ್ತಿಕ ಕೊಟ್ಟ ದೇವರು.pdf/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೦

ನಾಸ್ತಿಕ ಕೊಟ್ಟ ದೇವರು

ಅಪರಿಚಿತನಂತೆ ಕಂಡ ಒಬ್ಬರ ಹಗುರವಾದ ಸೂಟ್ಕೇಸನ್ನು ಇಮಾಮ್ ಸಾಬಿ ಹೊರಕ್ಕೊಯ್ದು ಜಟಕಾದಲ್ಲಿರಿಸಿದ. ಅವರಿತ್ತ ಎರಡಾಣೆಯನ್ನು ತನ್ನ ನೀಲಿ ಅಂಗಿಯ ಜೇಬಿಗೆ ಸೇರಿಸಿದ.
ಮೊದಲಾದರೆ, ಹೋಗುತ್ತಿದ್ದವರು ಬರುತ್ತಿದ್ದವರೆಲ್ಲ ಪರಿಚಿತರೇ. ಈಗ ಕೆಲವು ವರ್ಷಗಳಿಂದ ಬೀಡಿ ಕಾರಖಾನೆಗಳಾಗಿ, ಹತ್ತಿ ಹಿಂಜುವ ಒಂದು ಗಿರಣಿಯನೂ ಪಾರಂಭವಾಗಿ, ಊರಿನ ಜನಸಂಖ್ಯೆ ಹೆಚ್ಚಿತ್ತು.ಹಲವು ಹೊಸ ಮುಖಗಳು ನಿಲ್ದಾಣದಲ್ಲಿ ಕಾಣಿಸಿಕೊಳ್ಳುತ್ತಿದ್ದುವು.
ಸ್ವತಃ ನಿಲ್ದಾಣವೇ ಎಷ್ಟೊಂದು ಬದಲಾಗಿ ಬಿಟ್ಟಿತ್ತು ! ಸೀಮೆ ಎಣ್ಣೆಯ ಆಗಿನ ಮಿಣಿಮಿಣಿ ದೀಪಗಳೆಲ್ಲಿ, ಢಾಳಾಗಿ ಉರಿಯುವ ಈಗಿನ ವಿದ್ಯುತ್ ಬಲ್ಬುಗಳೆಲ್ಲಿ! ಆಗ ಸ್ಟೇಷನ್ ಮಾಸ್ತರರು ಎಲ್ಲ ಕೆಲಸವನ್ನೂ ಮಾಡಬೇಕಾಗಿತ್ತು. ಟಿಕೆಟ್ ಮಾರುವುದು, ಕೀಲಿಕೈ ಕೊಡುವುದು, ಪಡೆಯುವುದು, ಬಾವುಟ ಬೀಸುವುದು, ಗೇಟು ತೆರೆದು ಇಳಿದವರನ್ನು ಹೊರಬಿಡುವುದು-ಪ್ರತಿಯೊಂದನ್ನೂ. ಈಗ ಅವರಿಗೊಬ್ಬ ಸಹಾಯಕನಿದ್ದ.ಗೂಡ್ಸ್ ವಿಭಾಗವನ್ನು ನೋಡಿಕೊಳ್ಳಲು ಮತ್ತೂ ಒಬ್ಬನಿದ್ದ. ಹಿಂದಿನ ಕಟ್ಟಡವೂ ಗುರುತು ಸಿಗದಂತೆ ಮಾರ್ಪಾಟು ಹೊಂದಿತ್ತು. ಹಂಚುಗಳೆಲ್ಲ ಮಾಯವಾಗಿ ತಾರಸಿ ಛಾವಣಿಗಳು ಎತ್ತರದಲ್ಲಿ ಹರಡಿಕೊಂಡಿದ್ದುವು. ಹಳೆಯ ತಲೆಮಾರಿನ ಮಾಸ್ತರುಗಳೂ ಈಗಿಲ್ಲ. ಇತ್ತಿಚಿನ ಒಬ್ಬಿಬ್ಬರಂತು ಇಮಾಮ್ ಸಾಬಿಯನ್ನು 'ಹಮಾಲ್'ಎನ್ನುತ್ತಿರಲಿಲ್ಲ; 'ಪೋರ್ಟರ್' ಎಂದು ಕರೆಯುತ್ತಿದ್ದರು. ಕೈಗೆ ಕಟ್ಟಿಕೊಳ್ಳಲು ಹಿತ್ತಾಳೆಯ ಬಿಲ್ಲೆಗಳು ಬಂದಿದ್ದುವು. ಪೋರ್ಟರನ ನಂಬರು; ಒಂದು ಮಣವನ್ನು ಮೀರಿದ ಹೇರಿಗೆ ಎರಡಾಣೆ.' ಅದನ್ನು ಧರಿಸಲೇ ಬೇಕಾಗಿ ಬಂದಾಗ ಇಮಾಮ ಸಾಬಿ ಪಟ್ಟ ವ್ಯಥೆ ಅಷ್ಟಿಷ್ಟಲ್ಲ. ಅಷ್ಟು ಮಟ್ಟಿನ ಅವಿಶ್ವಾಸಕ್ಕೂ ಪಾಪ್ತವಾಯಿತೆ ತನ್ನ ವೃತ್ತಿ? ಇಂತಹ ಅವಮಾನವನ್ನೂ ಸಹಿಸಬೇಕೆ ತಾನು ? ಆದರೆ ಅವನ ಮಗ ಕರೀಮನಿಗೆ ಆ ಬಗೆಯ ಯಾವ ಕಸಿವಿಸಿಯೂ ಇಲ್ಲ, "ರೂಲ್ಸ್ ಬಾಬಾ, ರೂಲ್ಸ್,” ಎನ್ನುತ್ತಿದ್ದ ಆತ.
ಎರಡು ತಲೆಮಾರುಗಳ ನಡುವಿನ ಅಂತರವನ್ನು ನೆನೆದು ಇಮಾಮ್ ಸಾಬಿಗೆ ಸೋಜಿಗವೆನಿಸುತ್ತಿತ್ತು.