ಪುಟ:ನಾಸ್ತಿಕ ಕೊಟ್ಟ ದೇವರು.pdf/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ತಪ್ಪು ಎಣಿಕೆ

೪೧

ಮಾಡ್ಕೊಂಡಾಕ್ಷಣಕ್ಕೆ ಸಾಹೇಬ್‍ಗಿರೀನೋ? ಠುಸ್-ಪುಸ್ ಅಂತ ಇಂಗ್ಲಿಷ್ ಮಾತಾಡಿದರೆ ಕೆಲಸ ನಡಿಯುತ್ತೊ ?-ಅಂತಾನೆ . . . "
ತಮ್ಮ ಭಾವನೆಗಳಿಗೆಲ್ಲ ನಸುನಗೆಯ ಅವಕುಂಠನವೆಳೆದು ಉಮಾಪತಿ ಅಂದಿದ್ದರು.
"ಒಂದು ನೋಟ್ ತಯಾರ್‍ಮಾಡಿ."
ಒಂದು ದಿವಸದ ಅವಧಿಯ ಬಳಿಕ ಆ ನೋಟ್ ಬಂದಿತ್ತು.
ಉಮಾಪತಿ ಆಸನದ ಒರಗುದಿಂಬಿಗೊರಗಿ, ಕುರ್ಚಿಯ ಕೈಗಳ ಮೇಲೆ ತಮ್ಮ ಮೊಣಕೈಗಳನ್ನೂರಿ, ಅಂಗೈಗಳನ್ನೂ ಜೋಡಿಸಿ, ಗೋಡೆ ಗಡಿಯಾರದ ಟಿಕ್-ಟಾಕ್ ಸದ್ದಿಗೆ ತಾಳ ಹಾಕುತ್ತ ಮಡಚಿದ ಬೆರಳುಗಳಿಂದ ತಮ್ಮ ಮೂಗನ್ನು ಮುಟ್ಟುತ್ತಾ ಹೋದರು.
ಇನ್ನು ಹದಿನೈದು ನಿಮಿಷ.
ನಾಳೆಯಿಂದ ಅವರ ಮೊದಲ ಜಮಾಬಂದಿ ಪ್ರವಾಹ. ನಸುಕಿನಲ್ಲೇ ಹೊರಡಬೇಕು. ಹಿಂತಿರುಗುವುದು ಐದು ದಿನಗಳ ಬಳಿಕ.
ಆದರೆ, ಪ್ರವಾಸ ಹೊರಡುವುದಕ್ಕೆ ಮುನ್ನ ಮನೆಯಲ್ಲಿ (ಬಂಗಲೆಯಲ್ಲಿ) ಈ ಚೌರ್ಯದ ಪ್ರಕರಣ...
ವೀಣಾ ಇವತ್ತು ತಲೆಗೆ ಎರೆದುಕೊಂಡಿರಬೇಕು; ಸ್ನಾನದ ಮನೆಯಲ್ಲೇ ಬೆಂಡೋಲೆಗಳನ್ನು ಬಿಟ್ಟಿರಬೇಕು...
ಅಡುಗೆಯವನು–ಮುಸುರೆಯವಳು...ಆಹ!–ಆಕೆ ನಾಗಪ್ಪನ ಸಂಬಂಧಿಕಳು! 'ಅವನ ತಂಗಿ' 'ವಿಧವೆ'–ಎಂದಿದ್ದಳಲ್ಲ ವೀಣಾ?
ಅವರ ದೃಷ್ಟಿ, ತಮ್ಮೆದುರು ಮೇಜಿನ ಮೇಲಿದ್ದ ನೋಟ್ ನತ್ತ ಹರಿಯಿತು.
ಕಚೇರಿಯ ಮುಖ್ಯಸ್ಥ ಒಳಗೆ ಬಂದು ನಿಂತ.
ನಿವೃತ್ತಿಯ ಗೆರೆಯತ್ತ ಕುಂಟುತ್ತ ಸಾಗಿದ್ದ ಆ ವ್ಯಕ್ತಿಯನ್ನು ಉಮಾಪತಿ ದಿಟ್ಟಿಸಿದರು:
(ನಾಗಪ್ಪ ಕೆಟ್ಟವನು. ಆದರೆ ಈತ ಸತ್ಯವಾನನೆ? ಗರ್ಭಗುಡಿಗೇ ಪ್ರವೇಶವಿದ್ದ ಪೂಜಾರಿ ನಾಗಪ್ಪನಿಂದ ಈ ಮರಿದೇವರಿಗೆಲ್ಲ ಸ್ವಲ್ಪ ಅನ್ಯಾಯವಾಗಿರಬೇಕು . . .)
ಕುರುಚಲು ನರೆಗಡ್ಡವನ್ನು ಹಿಂಗೈಯಿಂದ ಒರೆಸಿ ಆತನೆಂದ: