ಪುಟ:ನಾಸ್ತಿಕ ಕೊಟ್ಟ ದೇವರು.pdf/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೨

ನಾಸ್ತಿಕ ಕೊಟ್ಟ ದೇವರು

"ಪ್ರವಾಸದ ಸಿಬ್ಬಂದಿಯನ್ನೆಲ್ಲಾ ಗೊತ್ತುಪಡಿಸಿದೇನೆ. ಫೈಲುಗಳನ್ನೆಲ್ಲಾ ಸಾರ್ಟ್ ಮಾಡಿದೇನೆ."
ಉಮಾಪತಿ, ಮೇಜಿನ ಮೇಲೆ ತಾವು ತೆಗೆದಿರಿಸಿದ್ದ ಕೆಲ ಫೈಲುಗಳ ಕಡೆಗೆ ಬೊಟ್ಟು ಮಾಡಿ ಅಂದರು :
"ಇವಿಷ್ಟು ಬಂಗ್ಲೆಗೆ. ಈ ನೋಟ್ ಮೇಲ್ಗಡೇನೇ ಇರ್‍ಲಿ."
“ನೋಟ್ ಸರಿಯಾಗಿದೆಯಾ ಸರ್?”
“ಟೂರಿಂದ ಬಂದ್ಮೇಲೆ ಆರ್ಡರ್ ಪಾಸ್ಮಾಡ್ತೀನಿ."
“ಆಗಲಿ, ಸರ್.”
ಮುಖ್ಯಸ್ಥ ಆಣಿಗೊಳಿಸಿದ ಫೈಲುಗಳ ಕಂತೆಯನ್ನು ಒಯ್ಯಲು ನಾಗಪ್ಪ ಬಂದ. ಯೌವನದ ಸೀಮೆಯನ್ನು ಉಲ್ಲಂಘಿಸಿದ್ದ ಅವನ ಕಣ್ಣುಗಳು ನಿರ್ವಿಕಾರವಾಗಿ ಕಚೇರಿಯ ಮುಖ್ಯಸ್ಥನನ್ನೂ ಸಾಹೇಬರನ್ನೂ ನೋಡಿದುವು. ಕಟ್ಟಿನ ಮೇಲುಭಾಗದಲ್ಲೇ ಇದ್ದ ಒಂಟಿ ಹಾಳೆಯನ್ನು ದಿಟ್ಟಿಸಿದುವು.
ಅವನ ದೃಷ್ಟಿಯ ಚಲನವಲನಗಳನ್ನು ಉಮಾಪತಿ ಗಮನಿಸಿದರು.
ಅದೇನನ್ನೋ ಹುಡುಕುತ್ತಿದ್ದ ಆ ಅನಕ್ಷರಸ್ಥ ಮನುಷ್ಯ ಆ ಕಾಗದದ ಗುರುತು ಹಿಡಿದಂತಿತ್ತು! ಕ್ಷಣಕಾಲ ಬೂದಿ ಸರಿದು ಆತನ ಕಣ್ಣ ಕೆಂಡಗಳು ಮಿನುಗಿದವು.
ಉಮಾಪತಿ ಕೈಗಡಿಯಾರವನ್ನು ನೋಡಿದರು. ಅಲ್ಲಿಂದ ದೃಷ್ಟಿಯನ್ನು ಕಿತ್ತು,ಗಡಿಯಾರದ ಮೇಲೆ ನೆಟ್ಟರು.
“ಸರ್ವೀಸಿಂಗಿಗೆ ಹೋದ ಜೀಪ್ ಬಂತೇನು?”
"ಆಗಲೆ ಬಂತು ಸರ್.”
"ಸರಿ, ಎಲ್ಲಾ ರೆಡಿಮಾಡಿ. ಸಿಬ್ಬಂದಿ ನಾಳೆ ಬೆಳೆಗ್ಗೆ ಐದು ಘಂಟೆಗೆ ಬಂಗ್ಲೆಗೆ ಬರ್‍ಲಿ."
“ ಹೂಂ, ಸರ್.”
"ನಾಗಪ್ಪ, ನೀನು ನನ್ನ ಜೊತೆಗೆ ಈಗ ಬಾ.”
ಹತ್ತಿಕ್ಕಿದ್ದ ಮಾತುಗಳ ಒತ್ತಡಕ್ಕೊಳಗಾಗಿದ್ದ ನಾಗಪ್ಪನ ಗಂಟಲಿನಿಂದ ಗೊಗ್ಗರ ಧ್ವನಿ ಹೊರಟಿತು.
"ಆಗ್ಲಿ ಬುದ್ದಿ.”