ಪುಟ:ನಾಸ್ತಿಕ ಕೊಟ್ಟ ದೇವರು.pdf/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ತಪ್ಪ ಎಣಿಕೆ

೪೩

ಅವನ ತಲೆ ಮಾತ್ರ ಚಿಟ್‌ಚಿಟೆಂದಿತು.ಬಾ ಎಂದು ಹೇಳುವ ಅಗತ್ಯವೇನಿತ್ತು? ಸಾಹೇಬರನ್ನು ಸಂಜೆ ಯಾವಾಗಲೂ ಬಂಗಲೆಗೆ ಹಿಂಬಾಲಿಸುವುದು ಮೂರು ವರ್ಷಗಳಿಂದ ನಡೆದು ಬ೦ದಿರಲಿಲ್ಲವೆ! ಅದೇನು ಹೊಸ ವ್ಯವಸ್ಥೆಯೆ ನೆನಪು ಮಾಡಿಕೊಡಲು?
ಆತನ ಸೂಕ್ಷ್ಮಬುದ್ದಿ ಇ೦ತಹದೇ ಕಾರಣವಿರಬೇಕೆ೦ದು ಊಹಿಸುತ್ತ, ಕಚೇರಿಯ ಮುಖ್ಯಸ್ಥನ ಮುಖವನ್ನೊಮ್ಮೆ, ತಾನು ಹೊರ ಬೀಳುತ್ತಲಿದ್ದಂತೆ ಇರಿಯುವ ನೋಟದಿಂದ ಆತ ನೋಡಿದ.
ಮುಖಭಾವದಿಂದ ತೋರ್ಪಡಿಸಲಿಲ್ಲವಾದರೂ ಮನಸ್ಸಿನೊಳಗೆ ಆ ಮುಖ್ಯಸ್ಥ ಅಂದುಕೊಂಡ :
"ನೋಟ್‌ಗೆ ಸಂಬಂಧಿಸಿ ಸಾಹೇಬರು ಇವತ್ತು ವಿಚಾರಣೆ ನಡಸ್ತಾರೆ.”
ಗೋಡೆ ಗಡಿಯಾರಕ್ಕೂ ತಮ್ಮದಕ್ಕೂ ಸಾಮ್ಯವಿಲ್ಲದುದನ್ನು ಉಮಾಪತಿ ತಾವು ಅಲ್ಲಿಗೆ ಬಂದ ದಿನದಿಂದಲೂ ಅರಿತಿದ್ದರು. ದಿನವೂ ಎರಡು ನಿಮಿಷ ತಡವಾಗಿಯೇ, ಕಚೇರಿಯ ಸಮಯಸೂಚಿಗನುಸಾರವಾಗಿಯೇ, ಅವರು ಸಂಜೆ ಹೊರಡುತ್ತಿದ್ದರು. ಆದರೆ ಈ ದಿನ ಆ ವ್ಯತಾಸ ಅವರಿಗೆ ಅಸಹನೀಯವಾಗಿ ಕಂಡಿತು.
ಕ್ಷಣಕ್ಷಣಕ್ಕೂ ವಿನಾ ಕಾರಣ ಹೆಚ್ಚು ಹೆಚ್ಚಾಗಿ ಕೆಂಪಡರತೊಡಗಿದ್ದ ಸಾಹೇಬರ ಮುಖವನ್ನು ನೋಡಿ, ಕಚೇರಿಯ ಮುಖ್ಯಸ್ಥ ಕಕ್ಕಾಬಿಕ್ಕಿ ಯಾಗಿ ಅವರ ಸನ್ನಿಧಿಯಿಂದ ಹೊರಟುಬಿಟ್ಟ.
ಆತನನ್ನು ಕೂಗಿ ಕರೆದು ತಮ್ಮ ವಸತಿಯಲ್ಲಾಗಿರುವ ಕಳವಿನ ವಿಷಯ ಹೇಳಬೇಕೆಂದು ಉಮಾಪತಿಯವರಿಗೆ ಅನಿಸಿತು. ಆದರೆ ಮರುಕ್ಷಣವೆ ಮೌನವೇ ಒಳಿತು ಎಂದು ತೋರಿತು.
ಅವರು ಎದ್ದು ಕಿಟಕಿಯ ಬಳಿ ನಿಂತು ವಿಸ್ತಾರವಾಗಿ ದೂರದವರೆಗೂ ಮೈಚಾಚಿದ್ದ ಬಯಲನ್ನು ನೋಡಿದರು. ಅಲ್ಲಿ ಇಲ್ಲಿ ಕೆಲ ಹಸುಗಳು ಸ್ವೇಚ್ಛೆಯಾಗಿ ಮೇಯುತ್ತಿದ್ದುವು. ಸಂಜೆ ಐದರ ಬಳಿಕ ಸಮಿಾಪದ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಅದು ಆಟದ ಬಯಲು.'ಘಂಟೆ ಹೊಡೆಯೋದನ್ನೇ ಹುಡುಗರು ಕಾಯುತ್ತಿರಬೇಕು.'