ಪುಟ:ನಾಸ್ತಿಕ ಕೊಟ್ಟ ದೇವರು.pdf/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೪

ನಾಸ್ತಿಕ ಕೊಟ್ಟ ದೇವರು

ಅವರ ಕೈಗಡಿಯಾರದಲ್ಲಿ ಐದಾಯಿತು. ಉಮಾಪತಿ ಲಗುಬಗೆಯಿಂದ ಹೊರಗೆ ನಿಂತಿದ್ದ ಜೀಪಿನೆಡೆಗೆ ನಡೆದರು.
ವಂದಿಸಲೆಂದು ತಮ್ಮನ್ನು ಹಿಂಬಾಲಿಸಿ ಬಂದ ಕಛೇರಿಯ ಮುಖ್ಯಸ್ಥನಿಗೆ ಅವರೆಂದರು:
"ಆಫೀಸ್ ಗಡಿಯಾರ ಹಿಂದಿದೆ, ಸರಿಪಡಿಸಿ."

****

ಚಲಿಸುತ್ತಿದ್ದ ಜೀಪಿನ ಹಿಂಭಾಗದಲ್ಲಿ ನಾಗಪ್ಪ ಕುಳಿತಿದ್ದ. ಕೊಳೆಯಾಗಿದ್ದ ಖಾದೀ ಸಮವಸ್ತ್ರದ ಬಿಗಿ ಗುಂಡಿಯ ಕೋಟಿನ ಮೇಲಿಂದ ಅವನ ಗಂಟಿಕ್ಕಿದ ಮುಖ ಕಾಣಿಸುತ್ತಿತ್ತು. ಏರುತಗ್ಗುಗಳಲ್ಲಿ ಜೀಪ್ ಕುಪ್ಪಳಿಸಿದಾಗಲೆಲ್ಲಾ, ಅವನ ತುಟಿಗಳು ಬೇರ್ಪಟ್ಟು, ಪರಸ್ಪರ ಬಿಗಿದ ಓರೆಕೋರೆ ಹಲ್ಲುಗಳು ಕಂಡುಬರುತ್ತಿದ್ದುವು.

ಸಿಡುಕು ಮುಖವಾಡದ ಹಿಂದೆ ಅವನ ಮನಸ್ಸು ಮಾತ್ರ ಹಲವು ಹದಿನೆಂಟು ಸಿಕ್ಕುಗಳನ್ನು ಬಿಡಿಸಿ ವಿಚಾರ ಸರಣಿಯನ್ನು ನೇರಗೊಳಿಸಲು ಪ್ರಯತ್ನಿಸುತ್ತಿತ್ತು.
ಇದ್ದಕ್ಕಿದ್ದಹಾಗೆ ಇದೊಳ್ಳೇ ಫಜೀತಿಗಿಟ್ಟುಕೊಂಡಿತಲ್ಲ! ಸಾಹೇಬರು ಬದಲಾದ ಮಾತ್ರಕ್ಕೆ ತನ್ನ ಸ್ಥಾನಮಾನಗಳಲ್ಲಿ ಏರುಪೇರಾಗಬೇಕೆ? ಅವರಿದ್ದಾಗ ಆಫೀಸಿನಲ್ಲೂ ಬಂಗ್ಲೆಯಲ್ಲೂ ತನ್ನದೇ ಆಡಳಿತ ನಡೆದಿತ್ತು. ಅಮ್ಮಾವ್ರು ಮತ್ತು ಸಾಹೇಬರು ಆ ಕಡೆಗೊಂದು ಮುಖ ಈ ಕಡೆಗೊಂದು, ಮುಖ ಆಗಿದ್ದರೂ ಅದೆಷ್ಟು ಪಂಸದಾಗಿ ಅವರಿಬ್ಬರನ್ನೂ ಇಟ್ಟಿದ್ದೆ. ಈಗ ಅವರಿಗೆ ವರ್ಗವಾಗಿ ಈ ಚೋಟುದ್ದ ಸಾಹೇಬ ಬಂದ್ಮೇಲೆ...
ಜೀಪ್ ವೇಗವಾಗಿ ಹೋಗಬಾರದೆ ಎನಿಸುತ್ತಿತ್ತು, ಚಾಲಕನ ಬಲ ಮಗುಲಲ್ಲಿ ಕುಳಿತಿದ್ದ ಉಮಾಪತಿಯವರಿಗೆ. ಆದರೆ ತಮ್ಮ ಅಪೇಕ್ಷೆಯ ಸುಳಿವನ್ನು ಮಾತ್ರ ಚಾಲಕನಿಗೆ ಅವರು ಹತ್ತಗೊಡಲಿಲ್ಲ. ಆಕ್ಸಿಲರೇಟರನ್ನು ಡ್ರೈವರ್ ಒಂದಿಷ್ಟು ಒತ್ತಿದನೆಂದರೆ ಜೀಪಿಗೆ ಆವೇಶ ಬರುವುದೆಂಬುದನ್ನು ಅವರು ಬಲ್ಲರು.
ಕಳೆದುಹೋದ ಬೆಂಡೋಲೆ ದೊರೆತರೆ ಸರಿ. ಇಲ್ಲದೆ ಇದ್ದರೆ? ಬೆಳಗಾಗುತ್ತಲೇ ತಾವು ಪ್ರವಾಸ ಹೊರಡಬೇಕು ಬೇರೆ...