ಪುಟ:ನಾಸ್ತಿಕ ಕೊಟ್ಟ ದೇವರು.pdf/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ತಪ್ಪು ಎಣಿಕೆ

೪೭

"ಮಲ್ಲಿ! ಸುಳ್ಳೆಳ್ದೆ ಅಂದ್ರೆ ಚಕ್ಳ ಸುಲ್ದೇನು ! ಎಲ್ಲೈತೆ ಬೆಂಡೋಲೆ?"
ಮಲ್ಲಿ ಅವನತ್ತ ನೇರವಾಗಿ ನೋಡದೆ ಉಳಿದವರನ್ನೆಲ್ಲ ಉದ್ದೇಶಿಸಿ ಅ೦ದಳು :
"ಎರಕ್ಕೋಳ್ಳೋವಾಗ್ಲೇ ಕಳೆದ್ಹೋಯ್ತೂಂತ ಅಮ್ಮಾವ್ರು ಯೇಳೋದಾದರೆ ಮೋರೀಲೋ ಮತ್ತೆಲ್ಲೋ ಬಿದ್ದಿರಬೇಕು.”
"ಮೋರೀಲೆಲ್ಲಾ ಆಗ್ಗೆ ಹುಡುಕ್ಲಿಲ್ವೆ?” ಎಂದರು ಸಾಹೇಬರ ಪತ್ನಿ.
"ಇನ್ನೊಂದ್ಸಲ ನೋಡಾನಾ ಬನ್ನಿ.”
ಮಲ್ಲಿಯ ನಾಯಕತ್ವದಲ್ಲಿ ಶೋಧಕರ ತಂಡ ಹೊರಟಿತು. ಸ್ನಾನ ಗೃಹದ ಮೂಲೆ ಮೂಲೆಗಳನ್ನೂ ಶೋಧಿಸಿದ್ದಾಯಿತು. ಎಲ್ಲಿಯೂ ಬೆಂಡೋಲೆ ಸಿಗಲಿಲ್ಲ.
ಅಲ್ಲಿಂದ ಅವರೆಲ್ಲ ಹೊರಬೀಳಬೇಕೆನ್ನುವಷ್ಟರಲ್ಲಿ ಮಲ್ಲಿ ಅಂದಳು :
"ಒಸಿ ತಾಳ್ರಿ. ನೀರಿನ ತೊಟ್ಟಿಯಾಗಿಷ್ಟು ನೋಡಾನ. ಅಕಾ, ಅದೇನು ಕಾಣಿಸ್ತಿರೋದು?”
"ಕಸ,” ಎಂದ ನಂಜಪ್ಪ.
"ಫಳಫಳ ಅಂತೈತೆ.”
"ಏ ಸಿದ್ದಾ, ತೊಟ್ಟಿಗೆ ಜಿಗಿ– ಮುಳುಗ್ನೋಡು,” ಎಂದು ನಾಗಪ್ಪ ಆಜ್ಞಾಪಿಸಿದ.
ಐದಡಿ ಎತ್ತರದ ತೊಟ್ಟಿಯನ್ನೇರಿ ಸಿದ್ದ ಒಳಕ್ಕೆ ಹಾರಿದ. ಮುಳುಗಿ ನೋಡಿದ; ಕೈಯಾಡಿಸಿದ; ಒಂದು ಬೆಂಡೋಲೆಯೊಡನೆ ಮೇಲಕ್ಕೆ ಬಂದ.
“ಹ್ಞಾ! ಅದೇನೇ!” ಎಂದು ಉದ್ಗಾರವೆತ್ತಿದರು ಸಾಹೇಬರ ಮಡದಿ.
"ಇನ್ನೊಂದ್ಸಲ ಮುಳುಗು!” ಎಂದ ನಾಗಪ್ಪ.
ಜೊತೆಯ ಬೆಂಡೋಲೆಯೂ ದೊರಕಿತು.
ಪತ್ನಿ ಹರ್ಷಿತಳಾದುದನ್ನು ಕಂಡು ಉಮಾಪತಿಯವರಿಗೂ ಸಮಾಧಾನವಾಯಿತು.
ನಾಗಪ್ಪ, ಸಾಹೇಬರೊಬ್ಬರೇ ಇದಾಗ ಅವರ ಬಳಿ ಸಾರಿ ನುಡಿದ:
"ಕಳ್ಳ ನನ್ಮಕ್ಳು- ನಂಬೋ ಹಂగిల్ల. ಸಿಕ್ಹಾಕೊಳ್ತೀವಿ ಅಂತ ಹೆದರಿತೊಟ್ಟಿಯೊಳಕ್ಕೆ ಆಕಿದ್ರೂ ಇರಬೋದು. ”