ಪುಟ:ನಾಸ್ತಿಕ ಕೊಟ್ಟ ದೇವರು.pdf/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೮

ನಾಸ್ತಿಕ ಕೊಟ್ಟ ದೇವರು

ವೀಣಾ ಮಾತ್ರ, ತಮ್ಮ ಪತಿಯೊಡನೆ ಅಂದರು :
"ತೊಟ್ಟಿಯ ದಂಡೆ ಮೇಲೆ ಬೆಂಡೋಲೇನ ಇಟ್ಟಿದ್ದೆ. ಜಾರಿಬಿದ್ದಿರ್ಬೇಕು. ಸುಮ್ಸುಮ್ನೆ ಎಷ್ಟೊಂದು ಹೆದರ್ಕೊಂಡ್ಬಿಟ್ಟಿ!"

****

ರಾತ್ರಿ ಉಮಾಪತಿ, ಆದಷ್ಟು ಬೇಗನೆ ಹೊರಟು ಬಂದು ಒಂದೆರಡು ತಿಂಗಳ ಮಟ್ಟಿಗೆ ತಮ್ಮೊಡನೆ ಇರಬೇಕೆಂದು ತಮ್ಮ ತಾಯಿಗೆ ಕಾಗದ ಬರೆದರು. ಹೊರಗಿನ ಕೆಲಸಕ್ಕಾಗಿ ಒಬ್ಬಳನ್ನು ಊರಿನಿಂದ ಕರೆದುಕೊಂಡು ಬರಬೇಕೆಂದೂ ತಿಳಿಸಿದರು.
"ಮಲ್ಲಿ ಬೇಡ ಅಂತೀರೇನು?” ಎಂದರು ವೀಣಾ.
"ಬರೆಯೋದು ಬರೆದಿದೇನೆ. ಮುಂದೆ ನೋಡೋಣ,” ಎಂದು ಉತ್ತರವಿತ್ತರು ಉಮಾಪತಿ.
"ಐದು ದಿನ ಒಬ್ಬಳೇ ಹೇಗಿರ್ಲಿ? ನಿಮ್ಮ ಜೊತೆ ನಾನೂ ಬರೋಕಾಗಲ್ವೆ?”
"ಅಸಿಸ್ಟೆಮಟ್ ಕಮೀಶನರು ಅ೦ದರೆ ಹಳೇ ಕಾಲದ ರಾಜರು ಅಂತ ತಿಳಕೊಂಡೆಯೇನು, ರಾಣೀವಾಸವನ್ನು ಕರಕೊಂಡು ಹೋಗೋದಕ್ಕೆ?”
"ಇದು ದೆವ್ವದಂಥ ಮನೆ. ಭಯವಾಗುತ್ತಪ್ಪ!”
"ಭಯವಂತೆ! ಹುಚ್ಚುಚ್ಚಾರ ಆಡ್ಬೇಡ.”
ಅವರು ಹಾಗೆ ಹೇಳುತ್ತಿದ್ದಂತೆಯೇ ಪಕ್ಕದ ಕೊಠಡಿಯಲ್ಲಿ ಏನೋ ಸದ್ದಾಯಿತು.
"ಯಾರದು?” ಎಂದರು ಉಮಾಪತಿ, ಧ್ವನಿ ಏರಿಸಿ.
ಉತ್ತರ ಬರಲಿಲ್ಲ. ಸರಸರನೆ ಯಾರೋ ಹಾದು ಹೋದಂತಾಯಿತು. ಉಮಾಪತಿ ಎದ್ದು ಬಾಗಿಲ ಬಳಿ ನಿಂತು ಅತ್ತಿತ್ತ ನೋಡಿದರು.
"ಬೆಕ್ಕಿರಬೇಕು," ಎಂದರು.
ವೀಣಾ ಅಂದರು:
"ಇದ್ದೀತು. ಬೆಳಗ್ಗೆ ಒಂದು ಬೆಕ್ಕನ್ನ ನೋಡ್ಡೆ. ಹುಲಿಯಷ್ಟು ದೊಡ್ಡದು. ಹಿಂದೆ ಇದ್ದವರು ಸಾಕಿದ್ದರಂತೆ. ಆತ ಎಂಥ ವಿಚಿತ್ರ ಮನುಷ್ಯನೋ ಅಂತೀನಿ"