ಪುಟ:ನಾಸ್ತಿಕ ಕೊಟ್ಟ ದೇವರು.pdf/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೫೦

ನಾಸ್ತಿಕ ಕೊಟ್ಟ ದೇವರು

ವೀಣಾ ಎಚ್ಚರದಿಂದ ಓಡಾಡಿದರು. ಒಂಟಿಯಾಗಿರಬೇಕಾದ ಪರಿಸ್ಥಿತಿ ಮದುವೆಯಾಗಿ ಒಂದು ವರ್ಷವಾಗಿತ್ತು. ಕಲಕತ್ತೆಯಲ್ಲಿ ಗಂಡ ತರಬೇತಿ ಪಡೆಯುತ್ತಿದ್ದಾಗ ನಾಲ್ಕು ತಿಂಗಳು ವೀಣಾ ಅವರ ಬಳಿ ಇದ್ದರು. ಒಂದೇ ಕೊಠಡಿಯ ಗುಬ್ಬಚ್ಚಿ ಸಂಸಾರ ಸ್ಮರಣೀಯವಾಗಿತ್ತು, ಆ ಪುಟ್ಟ ಆವಾಸ ಸ್ಥಾನದ ಅನಂತರ ಈಗ ಈ ದೊಡ್ಡ ಭವನ.ಆನೆ ಹೊಕ್ಕು ಬರಬಹುದಾದ ಬಾಗಿಲುಗಳು. ಬಾಗಿಲುಗಳಷ್ಟೆ ದೊಡ್ಡದಾದ ಕಿಟಿಕಿಗಳು. ಒಳ ಹಜಾರವನ್ನು ದಾಟಿ ಹೊರಗೆ ಬರಲು ಐದು ನಿಮಿಷ ಹಿಡಿಯುತ್ತಿತ್ತು. ಅಂಥ ಹರವು.
ఇಲ್ಲಿ, ಕತ್ತುಹಿಸುಕಿದರೆಂದು ಕಿರಿಚಿಕೊಂಡರೂ ಪ್ರತಿಧ್ವನಿಯಷ್ಟೇ ಕೇಳಿಸಬಹುದು.
ಭಯದಿಂದ ಅವರ ಮೈ ಬೆವತಿತು.
ಒಂಟಿ ಬದುಕಿನ ಮೊದಲ ರಾತ್ರಿ ಅವರಿಗೆ ಬಹಳ ಹೊತ್ತು ನಿದ್ದೆ ಹತ್ತಲಿಲ್ಲ. ಮಂಪರು ಬಂದಾಗ ಒಮ್ಮೆಲೆ ಎಚ್ಚರವಾಯಿತು. ಪಕ್ಕದ ಕೊಠಡಿಯಲ್ಲಿ ಸದ್ದು. ವೀಣಾ ಉಸಿರು ಬಿಗಿ ಹಿಡಿದರು. ಮಲ್ಲಿ ಒಬ್ಬಳೇ ಮಲಗಿದ್ದಳಲ್ಲ? ಯಾರಾದರೂ ಅವಳ ಕತ್ತು ಹಿಸುಕುತ್ತಿರಬಹುದೆ? ಊಹೂಂ. ಅದಲ್ಲ. ಅಯ್ಯೋ! ಮಲ್ಲಿ ಮತ್ತು ಯಾರು? ಯಾರು ಆತ? ಅಡುಗೆಯವನು? ಹುಡುಗ ಸಿದ್ಧ? ಎಂಥ ಹೊಲಸು!
ಮುಂದೆ, ದಿಂಬನ್ನು ಹಲ್ಲುಗಳೆಡೆ ಕಚ್ಚಿ ಮಲಗಿದ ಅವರಿಗೆ ನಿದ್ದೆ ಬರಲು ಬಹಳ ಹೊತ್ತು ಹಿಡಿಯಿತು.
ಬೆಳಗಾದ ಮೇಲೆ ಅವರು ಮಲ್ಲಿಯನ್ನೂ ಇತರರನ್ನೂ ಸೂಕ್ಷ್ಮವಾಗಿ ದಿಟ್ಟಿಸಿದರು. ಏನೂ ಸ್ಪಷ್ಟವಾಗದಿರಲು ಮಲ್ಲಿಯನ್ನು ಕರೆದು ಅವರು ಕೇಳಿದರು :
"ಪಕ್ಕದ ರೂಮ್ನಲ್ಲಿ ನಿನ್ನೆ ನೀನೊಬ್ಬಳೇ ಮಲಗಿದ್ದೆ, ಅಲ್ವೇನೆ?”
ಕತ್ತು ಕೊಂಕಿಸಿ ಮಲ್ಲಿ ಅಂದಳು :
“ಹೂಂ ಅಮ್ಮಾವ್ರೆ.”
"ಯಾರೋ ನಿನ್ಜತೆ ಮಾತಾಡಿದ ಹಾಗಾಯ್ತು.”
"ಅದೇ ? ನಾಗಣ್ಣ. ಒಸಿ ಸುಣ್ಣ ಎಲೆ ಬೇಕೂಂತ ಬಂದಿದ್ದ."
ಇದು ಸುಳ್ಳೆಂಬುದು ಖಚಿತವಾಗಿದ್ದ ವೀಣಾ ಪ್ರಶ್ನಿಸಿದರು :