ಪುಟ:ನಾಸ್ತಿಕ ಕೊಟ್ಟ ದೇವರು.pdf/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸ್ವಸ್ತಿಪಾನ

೫೯

ಸ್ನೇಹಪರವಾಗಿತ್ತಾದರೂ, ಮುಂದಿನ ಮಾತುಗಳನ್ನು ಅವರು ಆಡಿದುದು ಅರ್ಧ ಗಂಟೆಯ ಬಳಿಕ. ಮುಂದೆ ಮಂದಿರದಿಂದ ಅವರು ಹೊರಬಿದ್ದುದು, ಗಾಢ ಸ್ನೇಹಿತರಾಗಿ.
ಅ೦ದಿನಿಂದ ಬದರಿ, ಪಾನಯಾತ್ರೆಗೆ ಸಂಬಂಧಿಸಿ ಇತರಗೆಳೆಯರನ್ನು ಬಿಟ್ಟುಕೊಟ್ಟ. ಒಂಟಿ ಚಿಕ್ಕಣ್ಣಯ್ಯ ಬದರಿಗೆ ಅಂಟಿಕೊಂಡ. ಇಬ್ಬರೂ ಜೊತೆಯಾಗಿಯೇ ಚಿಕ್ಕಣ್ಣಯ್ಯನ ಪ್ರೀತಿಪಾತ್ರ ಮಂದಿರಕ್ಕೆ ಬರುತಿದ್ದರು, ತಿಂಗಳ ಪೂರ್ವಾರ್ಧದಲ್ಲಿ. ಒಟ್ಟು ಎರಡು ಮೂರು ಸಾರಿ.
ಯುದ್ಧ ಮುಕ್ತಾಯವಾದಾಗ ಕೆಲವು ಸಹಸ್ರ ಜನರೊಡನೆ ಬದರಿಗೂ ಬರ್ತರ್ಫ್ ಆಯಿತು. ವೇತನ ತುಸು ಕಡಮೆಯಾಯಿತಾದರೂ ಚಿಕ್ಕಣ್ಣಯ್ಯ ಉದ್ಯೋಗವನ್ನು ಉಳಿಸಿಕೊಂಡ. ಇದ್ದಕ್ಕಿದ್ದಂತೆ ಬದರಿ ಮಾಯವಾದುದನ್ನು ಕಂಡು ಅವನ ಮಿತ್ರನಿಗಾದ ವ್ಯಥೆ ಅಷ್ಟಿಷ್ಟಲ್ಲ. ಬೇಗನೆ ಚಿಕ್ಕಣ್ಣಯ್ಯನಿಗೆ ಮದುವೆಯಾಯಿತು. ಆರತ್ಯಕ್ಷತೆಯ ವೇಳೆಯಲ್ಲಿ ಬದರಿ ಕಾಣಿಸಿಕೊಳ್ಳಬೇಕೆ!
ಮದುವೆಯ ಅನಂತರ ಚಿಕ್ಕಣ್ಣಯ್ಯನ ಪಾನಯಾತ್ರೆ ಕಡಮೆಯಾಯಿತು. ತಿಂಗಳಿಗೊಮ್ಮೆಯಷ್ಟೇ ತಪ್ಪದೆ—ಮೊದಲ ವಾರ-ಆತ 'ಸರಮನಿ'ಗೆ ಬರುತ್ತಿದ್ದ. ನಿರುದ್ಯೋಗಿಯಾದ ಮೇಲೆ ಬದರಿ, ಸಣ್ಣ ಪುಟ್ಟ ನೌಕರಿಗಳ ದೀರ್ಘ ಸರಪಣಿಯನ್ನೇ ಹೆಣೆದ. ಆ ಸಂಸ್ಥೆಯ ಸೇಲ್ಸ್ ಮನ್, ಈ ಸಂಸ್ಥೆಯ ಪ್ರತಿನಿಧಿ-ಹೀಗೆ . . . ಯಾವ ದಿಕ್ಕಿಗೆ ಪ್ರವಾಸ ಹೋಗಿದ್ದರೂ ತಿಂಗಳ ಕೊನೆಯಲ್ಲಿ ಬದರಿ ಊರು ಸೇರುತ್ತಿದ್ದ. ಮೊದಲ ವಾರದ ಒಂದು ಸಂಜೆ ಗೆಳೆಯರು ಜೊತೆಯಾಗಿರುತ್ತಿದ್ದರು.
. . . ಚಿಕ್ಕಣ್ಣಯ್ಯನೀಗ ಐದು ಮಕ್ಕಳ ತಂದೆ. ವಾಸೆಕ್ಟಮಿ ಮಾಡಿಸಿಕೊಂಡಿರುವ, ಯೋಜಿತ ಕುಟುಂಬದ ಮುಖ್ಯಸ್ಥ. ಉದರ ಪ್ರದೇಶ ಸ್ವಲ್ಪ ಅಭಿವೃದ್ಧಿ ಹೊಂದಿದೆ; ಮೈ ಕೈಗಳು ತುಂಬಿಕೊಂಡಿವೆ. ಆದರೂ ತಲೆಗೂದಲ ಬಣ್ಣ ಅಚ್ಚಗಪ್ಪು. ಬದರಿ ಮಾತ್ರ ಇನ್ನೂ ಒಬ್ಬಂಟಿಗ. ವರ್ಷಗಳು ದಾಟಿದ್ದರೂ ಪಂದ್ಯಾಟದ ಪಟುವಿನ ಅಂಗಸೌಷ್ಠವವೇ ಈಗಲೂ. ತಲೆಯ ತುಂಬ ಬೆಳ್ಳಿ ಕೂದಲ ಪೊದೆ. ಅವನೀಗ ಯಾವ ಸಂಸ್ಥೆಯ ಪತಿನಿಧಿಯೋ ಹೇಳುವುದು ಕಷ್ಟ. ಟ್ರಾನ್ಸಿಸ್ಟರ್ ರೇಡಿಯೋಗಳು; ಬೆಲೆ