ಪುಟ:ನಾಸ್ತಿಕ ಕೊಟ್ಟ ದೇವರು.pdf/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬೦

ನಾಸ್ತಿಕ ಕೊಟ್ಟ ದೇವರು

ಬಾಳುವ ಕೈ ಗಡಿಯಾರಗಳು, ಅಮೂಲ್ಯ ಪೆನ್ನುಗಳು-ಏನು ಬೇಕಾದರೂ ಆತನಲ್ಲಿ ಸಿಗುತ್ತವೆ. 'ಕೈ ತುಂಬ ಸಂಪಾದನೆ ಇರುವ ಮನುಷ್ಯ'... ]
ಕಹಿ ಗುಟುಕನ್ನು ನುಂಗಿ, ತುಟಿಗಳನ್ನು ಬಿಗಿದು, ಮಿತ್ರನನ್ನು ಕಂಡು ಯುಗಗಳೇ ಕಳೆದುವೇನೋ ಎನ್ನುವಂತೆ ಚಿಕ್ಕಣ್ಣಯ್ಯ, ಬದರಿಯನ್ನು ದಿಟ್ಟಿಸಿದ.
"ಮನೆಯಿಲ್ಲ, ಸಂಸಾರವಿಲ್ಲ-ಆದರೂ ಊರಿಗೆ ವಾಪಸು ಬರೋದು ಅ೦ದರೆ ಎ೦ಥ ಸುಖ ಅ೦ತೀಯಾ !” ಎಂದ ಬದರಿ.
"ಹೂಂ.”
ಚಿಕ್ಕಣ್ಣಯ್ಯ ಅಪ್ರತಿಮ ಶ್ರೋತೃ. ಬದರಿಯೇ ಮಾತುಗಾರ, ಯಾವಾಗಲೂ.
" ಈ ಸಲ ಕಾರವಾರದ ಕಡೆಗೆ ಪ್ರವಾಸ ಹೋಗಿದ್ದೆ. ಒಣ ನೆಲದಿಂದ ವಾಪಸಾದವರಿಗೆಲ್ಲಾ ಈ ಊರು ನಂದನವೇ ಅಂತೀಯೇನೋ?”
“ಹಹ್ಹ.”
"ಹೆಸರಿಗೆ ಒಣ ನೆಲ. ಅಲ್ಲಿ ಸಿಗದ ವಸ್ತುವಿಲ್ಲ. ಬೆಲೆ ವಿಷಯದಲ್ಲಿ ಚೌಕಾಶಿ ಮಾಡದೇ ಇದ್ದರಾಯ್ತು !”
"ಹುಂ."
"ಈ ಟ್ರಿಪ್ನಲ್ಲಿ ಒಬ್ಬ ಅದ್ಭುತ ಮನುಷ್ಯನನ್ನು ಕಂಡೆ."
ಕಣ್ಣುಗಳನ್ನು ಕಿರಿದುಗೊಳಿಸಿ ಚಿಕ್ಕಣ್ಣಯ್ಯ ಒ೦ದು ಮಾತು ಅ೦ದ.
"ಕಳ್ಳಭಟ್ಟಿ ಉದ್ಯಮಗಳ ಅರಸನೋ?”
“ಛೆ! ಇಂಥವರನ್ನ ನೋಡೋಕೆ ಅಲ್ಲಿಗೆ ಹೋಗ್ಬೇಕೆ? ನಾನು ಸಂಧಿಸಿದ್ದು ಅಸಾಧಾರಣ ಮನುಷ್ಯನನ್ನು!” ಎಂದ ಬದರಿ, ಬಟಾಟೆ ಚಿಪ್ಗಳನ್ನು ಬಾಯಿಗಿಟ್ಟ ಕುರುಕುತ್ತ.
ಕಥನವನ್ನು ಎಲ್ಲಿ ಹೇಗೆ ಆರಂಭಿಸಬೇಕು ಎಂದು ಆತ ಯೋಚಿಸುವಂತಿತ್ತು.
ಇನ್ನೊಂದು ಗುಟುಕು ಹೀರಿ ಚಿಕ್ಕಣ್ಣಯ್ಯನೆಂದ:
“ನಾನು ಸಿದ್ಧವಾಗಿದೀನಿ.”

****