ಪುಟ:ನಾಸ್ತಿಕ ಕೊಟ್ಟ ದೇವರು.pdf/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸ್ವಸ್ತಿ ಪಾನ

೬೧

ಅದ್ಭುತ ಮನುಷ್ಯನನ್ನು ಬದರಿ ಸಂಧಿಸಿದ್ದು ಕಡಲ ದಂಡೆಯಲ್ಲಲ್ಲ,- ಮೂವತ್ತು ನಾಲ್ವತ್ತು ಮೈಲಿಗಳ ಒಳಭಾಗದಲ್ಲಿ, ಅಡವಿಯ ನಡುವೆ.
ಅಲ್ಲಿಗೆ ಬದರಿ ಹೋಗಲು ಕಾರಣವಿತ್ತು. ಅವನ ಪರಿಚಿತರೊಬ್ಬರು, "ಡೈನಿಂಗ್ ಟೇಬಲು ಮಾಡಿಸೋಕೆ ಮೂರಡಿ ಅಗಲ ಆರಡಿ ಉದ್ದದ ಒಂದು ಅಖಂಡ ಹಲಿಗೆ ಬೇಕು. ಎಲ್ಲಾದರೂ ಇದ್ದರೆ ಕೊಡಿಸಿ," ಎಂದಿದ್ದರು.
ಕಾರವಾರದ ವ್ಯಾಪಾರಿ ಮಿತ್ರನೊಬ್ಬನನ್ನು ಬದರಿ ಕೇಳಿದ.
"ಎಲ್ಲಿ ಸಿಗಬಹುದು?"
ಆತ ಕೊಟ್ಟುದು ದಯಾನಂದ ಸಾವ್ಕಾರರ ವಿಳಾಸವನ್ನು.
"ನೀವು ಹೋಗೋದಿದ್ದರೆ ಬೆಳಗ್ಗಿನ ಆರು ಘಂಟೆ ಬಸ್ನಲ್ಲೇ ಹೊರಡ್ಬೇಕು. ಮಧ್ಯಾಹ್ನ ಹನ್ನೆರಡು ಘಂಟೆ ಆದ್ಮೇಲೆ ಸಾವ್ಕಾರ್ರು ವ್ಯಾಪಾರ ಮಾಡೋದಿಲ್ಲ !"
"ಅಂದರೆ?"
"ಅವರ ಪದ್ಧತಿ ಹಾಗೆ! ನೀವು ಬನ್ನಿ. ಸಾಯಂಕಾಲ ವಾಪಸಾಗ್ಬಹುದು."
ಮಾರನೆಯ ಬೆಳಗ್ಗೆ ನಸುಕಿನಲ್ಲೆದ್ದು ಬದರಿ, ಧೂಳೆಬ್ಬಿಸುವ ಕೆಂಪು ಬಸ್ಸಿನಲ್ಲಿ ಕುಳಿತು ಅಡವಿಯ ಮಾರ್ಗವಾಗಿ ಪ್ರಯಾಣ ಬೆಳಸಿದ.
ಅವನು ಆ ಊರನ್ನು ತಲಪಿದ್ದು ಹತ್ತು ಘಂಟೆಯ ಹೊತ್ತಿಗೆ. ಬಸ್ಸಿನಿಂದಿಳಿದವನಿಗೆ ವಿಳಾಸದಾರರನ್ನು ಹುಡುಕುವ ಕಷ್ಟವೇನೂ ಒದಗಲಿಲ್ಲ. ಅಲ್ಲಿದ್ದುದು ಒಂದೇ ರಸ್ತೆ. ರಸ್ತೆಯ ಮೇಲಿದ್ದವರು ಸಾಗುತ್ತಿದ್ದುದೆಲ್ಲ ಒಂದೇ ದಿಕ್ಕಿಗೆ-ಸಾಹುಕಾರರ ಅಡ್ಡೆಗೆ. ಕಾಡು ಕಡಿದು ಮಾಡಿದ ನಾಲ್ಕೆಕರೆ ಬಯಲು ಸ್ಥಳದಲ್ಲಿ ಮರದ ತೊಲೆಗಳು ಅಸಂಖ್ಯವಾಗಿ, ಸಾಲಾಗಿ, ಕೊನೆಯೆ ಇಲ್ಲ ಎಂಬಂತೆ ಪಿರಮಿಡ್ಡುಗಳಾಗಿ ವಿರಮಿಸುತ್ತಿದ್ದುವು. ಬಲಶಾಲಿ ಟ್ರಕ್ಕುಗಳು ಓಡಾಡುತ್ತಿದ್ದುವು. ಎರಡು ಆನೆಗಳು ದಿಮ್ಮಿಗಳನ್ನು ಒಟ್ಟುವ ಕೆಲಸ ನಡೆಸಿದ್ದುವು. ದೇಶದ ವಿವಿಧ ಭಾಗಗಳಿಂದ ಬಂದ ಗಿರಾಕಿಗಳು, ಧೂಳುಮುಚ್ಚಿದ ದುಡಿಯುವರ ನಡುವೆ ಎದ್ದು ಕಾಣಿಸುತ್ತಿದ್ದರು. ಇದು ಆಫೀಸು, ಇದು ಡಿಪೋ ಎಂದು ತೋರಿಸುವ ಯಾವ ಬೋರ್ಡೂ ಅಲ್ಲಿರಲಿಲ್ಲ. ಸ್ವತಃಸಾಹುಕಾರರೇ ಆ ಊರಿಗೆ ಒಂದು ಬೋರ್ಡು. ಅವರಿಂದ