ಪುಟ:ನಾಸ್ತಿಕ ಕೊಟ್ಟ ದೇವರು.pdf/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬೨

ನಾಸ್ತಿಕ ಕೊಟ್ಟ ದೇವರು

ಊರಿಗೊಂದು ಪ್ರಸಿದ್ಧಿ. ಆ ಊರು ನಿರ್ಮಾಣವಾದುದೂ ಅವರ ಉದ್ಯಮದ ಫಲವಾಗಿ.
ಬದರಿ ಕಾರ್ಯಾಗಾರವನ್ನು ಸಮಿಾಪಿಸಿದಂತೆ, ಕಟ್ಟಿಗೆ ಕೊರೆಯುವ ಮರಕುಯ್ಯುವ-ಯಂತ್ರಗಳ ಸಪ್ಪಳ ಬಲಗೊಂಡಿತು.
ಮೂಲೆಯಲ್ಲಿ, ಮರದ ಹಲಗೆಗಳನ್ನಷ್ಟೆ ಜೋಡಿಸಿ ಕಟ್ಟಿದ ಒಂದಂತಸ್ತಿನ ಪುಟ್ಟ ಮನೆಯೊಂದಿತ್ತು. ಛಾವಣಿಗೂ ಹಲಗೆಗಳು. ಇಡಿಯ ಮನೆಗೇ ಅಂಟಿಕೊಂಡಿತ್ತು, ಹಲವು ಟಿನ್ನುಗಳನ್ನು ಒಡೆದು ಹೊರಬಂದ ಹಸುರು ವಾರ್ನಿಷ್ ಬಣ್ಣ. ಕಿಟಕಿ ಬಾಗಿಲುಗಳ ಚೌಕಟ್ಟುಗಳಿಗೆ ಮಾತ್ರ ಕಂದು ವರ್ಣವಿತ್ತು. ಹಸುರು ಕಾಡಿನ ಸಾರಸರ್ವಸ್ವ, ಆ ಗೃಹದ ಕುಶಲ ಕಲೆಗಾರಿಕೆಯಲ್ಲಿ ಘನೀಭವಿಸಿದಂತಿತ್ತು. ಸಾ ಮಿಲ್ಲುಗಳಿಗೆ ತುಸುದೂರದಲ್ಲಿ, ಕಟ್ಟಿಗೆಯಿಂದಲೇ ಕಟ್ಟಿದ ಚಪ್ಪರದಂತಹ ಒಂದು ಭವನ. ಅಲ್ಲಿ ಹತ್ತಾರು ಕುರ್ಚಿಗಳಲ್ಲಿ ಜನರು ಕುಳಿತಿದ್ದರು. ಚಪ್ಪರದಲ್ಲಿ ಒಂದು ಕೊನೆಯಲ್ಲಿ ವೇದಿಕೆ. ಆ ವೇದಿಕೆಯ ಮೇಲೆ ಒರಗುದಿಂಬುಗಳು. ಅತಿ ದೊಡ್ಡದಾದ ದಿಂಬಿಗೊರಗಿ ಭವ್ಯಾಕೃತಿಯ ಆರವತ್ತು ದಾಟಿರಬಹುದಾದ ವೃದ್ಧರೊಬ್ಬರು ಕುಳಿತಿದ್ದರು. ಅವರ ಮಗ್ಗುಲಲ್ಲಿ ಫೋನಿತ್ತು. ಆ ಕಾಡಿನಲ್ಲಿ ಫೋನ್! ವೇದಿಕೆಯ ಕೆಳಗೆ ಆ ಗೃಹಸ್ಥರ ಬಲ ಮಗ್ಗುಲಲ್ಲಿ ನಾಲ್ಕಾರು ಜನ ಕಾರಕೂನರು ಸಾಲಾಗಿ ಕುಳಿತಿದ್ದರು, ಮಸಿ ಕುಡಿಕೆಗಳಿಗೆ ಅದ್ದಿ ಅದ್ದಿ ದೊಡ್ಡ ಪುಸ್ತಕಗಳಲ್ಲಿ ಬರೆಯುತ್ತ. ಆಳುಗಳು ಬರುತ್ತಲಿದ್ದರು, ಹೋಗುತ್ತಲಿದ್ದರು. ಟ್ರಕ್ ಡ್ರೈವರುಗಳು ಲೆಕ್ಕ ಒಪ್ಪಿಸುತ್ತಿದ್ದರು. ಸಲಾಂ ಮಾಡುತ್ತಿದ್ದರು.
ಬದರಿ ಮೂಕವಿಸ್ಮಿತನಾಗಿ ಆ ಚಪ್ಪರವನ್ನು ಪ್ರವೇಶಿಸಿದ. ಅಂತಹ ಜಗತ್ತೊಂದು ಅಲ್ಲಿತ್ತೆಂಬುದೇ ಅವನಿಗೆ ಅಚ್ಚರಿಯ ವಿಷಯವಾಗಿತ್ತು.
ತಾನು ಹೋದೊಡನೆಯೇ ಸಂಭಾಷಣೆ ಈ ರೀತಿಯಾಗಿ ನಡೆಯಬಹುದೆಂದು ಬದರಿ ತರ್ಕಿಸಿದ್ದ.
“ನಮಸ್ಕಾರ ಬರಬೇಕು.”
“ನಮಸ್ಕಾರ. ದಯಾನಂದ ಸಾವ್ಕಾರ್ರನ್ನು ನೋಡಬೇಕಿತ್ತು.”
“ನಾನೇ ದಯಾನಂದ ಸಾವ್ಕಾರ. ಹೇಳೋಣಾಗಲಿ.”