ಪುಟ:ನಾಸ್ತಿಕ ಕೊಟ್ಟ ದೇವರು.pdf/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸ್ವಸ್ತಿಪಾನ

೬೩

ಊಹೂಂ. ತರ್ಕ ತಪ್ಪಾಗಿತ್ತು. ಬದರಿಯನ್ನು ಯಾರೂ ಸ್ವಾಗತಿಸಲಿಲ್ಲ, ಯಾರೂ ಮಾತನಾಡಿಸಲಿಲ್ಲ.
ಅಲ್ಲಿ ನೆರೆದ ಸಭೆಯ ಕೇಂದ್ರಬಿಂದುವಾಗಿದ್ದ ವ್ಯಕ್ತಿ ಮಾತ್ರ ರಾಜ ಠೀವಿಯಿಂದ ಹೊಸಬನನ್ನು ನೋಡಿತು. ಬದರಿ ತನಗರಿವಿಲ್ಲದಂತೆಯೇ ತುಸು ತಲೆಬಾಗಿದ. ಈತ ಈ ಪ್ರದೇಶದ ಆರಸು; ಇದು ದರಬಾರು; ಕುಳಿತಿದ್ದವರು ಸುತ್ತಮುತ್ತಲಿನ ಪಾಳೆಯಗಾರರು; ತಾನೊಬ್ಬನೇ ದೂರ ದೇಶದಿಂದ ಬಂದಿರುವ ಯಾತ್ರಿಕ-ಎಂದೆಲ್ಲ ಬದರಿಗೆ ಅನಿಸಿತು. ಪ್ರವೇಶ ದ್ವಾರದ ಬಳಿಯಲ್ಲೊಂದು ಕುರ್ಚಿ ಖಾಲಿ ಇತ್ತು. ಅತಿಥಿ ಸತ್ಕಾರದ ಹಾದಿನೋಡದೆ ಬದರಿ ಅದರಲ್ಲಿ ಕುಳಿತುಕೊಂಡ.
ವೇದಿಕೆಯ ಮಧ್ಯದಲ್ಲಿ ವಿರಾಜಮಾನರಾಗಿದ್ದವರೇ ಸಾಹುಕಾರರೆಂಬುದು ಸ್ಪಷ್ಟವಾಗಿತ್ತು. ಸ್ವಲ್ಪ ಕಾಲ, ತಾನು ಬಂದುದರ ಉದ್ದೇಶವನ್ನೇ ಮರೆತು, ಬದರಿ ಬರಿಯ ಪ್ರೇಕ್ಷಕನಾಗಿ ಅಲ್ಲಿ ನಡೆಯುತ್ತಿದ್ದುದನ್ನು ದಿಟ್ಟಿಸಿದ.
ಸಂಭಾಷಣೆಗಳು-ನಗೆ. ಹಿಂದಿಯಲ್ಲಿ, ಮರಾಠಿಯಲ್ಲಿ, ಕೊಂಕಣಿಯಲ್ಲಿ, ತಮಿಳಿನಲ್ಲಿ, ಕನ್ನಡದಲ್ಲಿ, ಟ್ರಂಕ್ ಕಾಲುಗಳು-ಮುಂಬಯಿಯಿಂದ, ಮದರಾಸಿನಿಂದ, ವಿಲಾಯಿತಿಗೆ ಹೊರಡಲು ಹಡಗು ಸಿದ್ಧವಾಗಿ ನಿಂತಿದ್ದ ಧಕ್ಕೆಯಿಂದ.
ಜನಸಂದಣಿ ಕರಗತೊಡಗಿತು. ಸಾಹುಕಾರರೂ ಕೈ ಗಡಿಯಾರವನ್ನು ನೋಡಿದರು. ಅದನ್ನು ದಿಟ್ಟಿಸಿದ ಬದರಿ, ತಾನೂ ತನ್ನ ವಾಚಿನತ್ತ ದೃಷ್ಟಿ ಹರಿಸಿದ. ಹನ್ನೊಂದೂವರೆ. ಇದ್ದಕ್ಕಿದ್ದಂತೆ ಅವನಿಗೆ ನೆನಪಾಯಿತು. "ಮಧ್ಯಾಹ್ನ ಹನ್ನೆರಡು ಘಂಟೆ ದಾಟ್ಟಿದ್ಮೇಲೆ ಸಾವ್ಕಾರ್ರು ವ್ಯಾಪಾರ ಮಾಡೋದಿಲ್ಲ.”
ಕಾತರಗೊಂಡ ಬದರಿ ಕುಳಿತಲ್ಲೆ ಮಿಸುಕಿದ.
ಅಷ್ಟರಲ್ಲಿ ಒಬ್ಬ ಆಳು ಅವನೆಡೆಗೆ ಬಂದ.
"ಸಾವ್ಕಾರ್ರು ಕರೀತಾರೆ. ಮೇಲೆ ಬರಬೇಕಂತೆ.”
ಹಿಂದೂಸ್ಥಾನಿಯಲ್ಲಿ ಹೇಳಿದ ಮಾತು. ಮೇಲೆ ಅಂದರೆ ವೇದಿಕೆಗೇ ಇರಬೇಕು-ಎಂದುಕೊಂಡ ಬದರಿ.
ಆತ ಎದ್ದು ತನ್ನ ಬ್ರೀಫ್ ಕೇಸಿನೊಡನೆ ಸಾಹುಕಾರರತ್ತ ಸಾಗಿದ.