ಪುಟ:ನಾಸ್ತಿಕ ಕೊಟ್ಟ ದೇವರು.pdf/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬೪

ನಾಸ್ತಿಕ ಕೊಟ್ಟ ದೇವರು

ಅಪರಿಚಿತ ಬಾಲಕನ ಬಗೆಗೆ ಪ್ರೀತಿ ತೋರುವ ಹಿರಿಯನಂತೆ ಸಾಹುಕಾರರು ಮುಗುಳುನಕ್ಕು, ಹತ್ತಿರ ಬರಲು ಸನ್ನೆ ಮಾಡಿದರು. ಬದರಿ ತನ್ನ ವ್ಯಕ್ತಿತ್ವವನ್ನು ರಕ್ಷಿಸಲೆತ್ನಿಸುತ್ತ, ಸಾಕಷ್ಟು ಠೀವಿಯಿಂದಲೆ ಅವರ ಬಳಿ ಕುಳಿತ.
ಏನು ಬೇಕಿತ್ತು?-ಎನ್ನುವ ಪ್ರಶ್ನೆಯನ್ನು ಅವರ ಮುಖಭಾವ ಪ್ರಕಟಿಸಿತು.
ಬೆಳಗ್ಗಿನಿಂದ ಮೌನಾಚರಣೆಯಲ್ಲಿದ್ದ ಗಂಟಲನ್ನು ಸರಿಪಡಿಸುತ್ತ ಬದರಿಯೆಂದ:
“ಮೂರಡಿ ಅಗಲ, ಆರಡಿ ಉದ್ದದ ಹಲಗೆ . . .”
“ಎಷ್ಟು?”
ಮುದುಕನಿಗೆ ಕಿವಿ ದೂರವೇನೋ ಎಂಬ ಶಂಕೆಯಿಂದ ಬದರಿ ತುಸು ಧ್ವನಿ ಏರಿಸಿ ನುಡಿದ:
“ಮೂರಡಿ ಅಗಲ, ಆರಡಿ ಉದ್ದ . . .”
ಬದರಿಗೇ ಕಿವಿ ಮ೦ದವಿರಬಹುದೆಂದು ಸಾಹುಕಾರರು ಭಾವಿಸಿದರೇನೋ ಎನ್ನುವಂತೆ ಅವರು ಗಟ್ಟಿಯಾಗಿ ಅಂದರು :
“ಅದೇ-ಎಷ್ಟು ಬೇಕು?”
ಬದರಿ ಕಕ್ಕಾವಿಕ್ಕಿಯಾಗಿ ಪಿಳಿಪಿಳಿ ಕಣ್ಣುಬಿಟ್ಟ, ತಾನೆಂತಹ ಆಭಾಸಕರ ಸನ್ನಿವೇಶಕ್ಕೆ ತುತ್ತಾದೆನೆಂಬುದರ ಪೂರ್ಣ ಅರಿವು ಅವನಿಗಾಯಿತು. ಮುದುಕ ಉತ್ತರಕ್ಕಾಗಿ ಕಾದು ಅದೆಷ್ಟೋ ವರ್ಷಗಳಾದುವೆಂಬಂತೆ ಆತನಿಗೆ ಭಯವಾಯಿತು. ಥಟ್ಟನೆ ಅವನೆಂದ:
“ಹತ್ತು.”
ಕಬ್ಬಿಣ ಉಕ್ಕುಗಳ ರಖಂ ವ್ಯಾಪಾರಿಯ ಬಳಿಗೆ ಹೋಗಿ ಒಂದು ಬಿಡಿ ಸೂಜಿಯನ್ನು ಕೊಡಿರೆನ್ನುವುದೇ?
ಸಾಹುಕಾರರು ತಮ್ಮ ನೀಳವಾದ ತೋಳನ್ನು ಮುಂದಕ್ಕೆ ಚಾಚಿ, ತೋರು ಬೆರಳಿನಿಂದ ಏನನ್ನೊ ಬೊಟ್ಟುಮಾಡಿ ತೋರಿಸಿದರು. ಅವರ ಬೆರಳಿನ ಗುರಿಯತ್ತ ಬದರಿ ನೋಡಿದ. ಏಳೆಂಟು ಜನ ಕೈ ಕೈ ಹಿಡಿದು ಸುತ್ತುವರಿದು ತಬ್ಬಬೇಕಾದಂತಹ ದೈತ್ಯಾಕೃತಿಯ ಮರದ ಕಾಂಡಗಳು ಹತ್ತಾರು ಅಲ್ಲಿ ಬಿದ್ದಿದ್ದುವು.