ಪುಟ:ನಾಸ್ತಿಕ ಕೊಟ್ಟ ದೇವರು.pdf/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸ್ವಸ್ತಿಪಾನ

೬೫

ಬದರಿ ಬೇಗನೆ ಅರ್ಥಮಾಡಿಕೊಂಡ-ಆ ಕಾಂಡಗಳಲ್ಲೊಂದನ್ನು ಸೀಳಿ ತನಗೆ ಬೇಕಾದ ಹತ್ತು ಹಲಗೆಗಳನ್ನು ಸಿದ್ಧಗೊಳಿಸಲಾಗುವುದೆಂದು.
“ಒಂದೊಂದಕ್ಕೆ ಎಂಬತ್ತೈದು ರೂಪಾಯಿ.”
ಅಷ್ಟು ದೊಡ್ಡ ಮರದ ಕಾಂಡಕ್ಕೆ ಎಂಬತ್ತೈದು ರೂಪಾಯಿ?
ಬದರಿ ತನ್ನ ಕಿವಿಗಳನ್ನು ತಾನು ನಂಬದಾದ. [ಕೊಡಗಿನಲ್ಲಿ ಮಾತ್ರ ಕಾಫಿ ಅಗ್ಗವಲ್ಲ!] ಆದರೂ, ತನ್ನ ತಿಳಿವಳಿಕೆ ಖಚಿತವಾಗಲೆಂದು– “ಒಂದೊಂದಕ್ಕೇ?” ಎಂದು ಕೇಳಿದ.
“ಹ್ಞ, ಹತ್ತು ಹಲಿಗೆಗೆ ಒಟ್ಟು ಎಂಟು ನೂರಾ ಐವತ್ತು ರೂಪಾಯಿ.”
ಹುಡುಗನಿಗೆ ಲೆಕ್ಕ ತಪ್ಪದಿರಲೆಂದು ಅವರು ಬಿಡಿಸಿ ಹೇಳಿದ್ದರು.
ಬದರಿ ಉಗುಳು ನುಂಗಿದ. ತನ್ನ ಸಂಕಟವನ್ನು ತೋರ್ಪಡಿಸದೆ ಬ್ರೀಫ್ ಕೇಸಿನಿಂದ ಚೆಕ್ ಪುಸ್ತಕ ತೆರೆದು ೮೫೦ ರೂ.ಗೆ ಚೆಕ್ ಬರೆದ.
“ಇದು ಕ್ಯಾಷ್ ಆದ್ಮೇಲೆ ಹಲಗೆಗಳನ್ನು ತಾವು ಕಳಿಸಿಕೊಡబಹುದು," ಎಂದ.
ಬ್ಯಾಂಕಿನ ಹೆಸರನ್ನೂ ಊರು ಯಾವುದೆಂಬುದನ್ನೂ ನೋಡಿದ ಸಾಹುಕಾರರು ಅ೦ದರು :
“ಅಂಥಾದ್ದೇನೂ ಇಲ್ಲ. ಇವತ್ತೇ ಕುಯ್ಯಿಸ್ತೇವೆ. ನಾಳೆ ನಮ್ಮ ಟ್ರಕ್ಕು ಹುಬ್ಬಳ್ಳಿಗೆ ಒಯ್ತದೆ. ಇಷ್ಟು ಫ್ರೀ ಡೆಲಿವರಿ, ಮುಂದೆ ನಿಮ್ಮೂರಿಗೆ ಟುಪೇ ಗೂಡ್ಸ್ ಪಾರ್ಸಲ್ ಮಾಡ್ತೇವೆ. ಅಡ್ರಸ್ ಕೊಟ್ಟು ಹೋಗ್ರಿ.”
ಯೋಚಿಸುವುದಕ್ಕೆ ಒಂದೆರಡು ನಿಮಿಷಗಳ ಅವಧಿಯೂ ಇರಲಿಲ್ಲ ಬದರಿಗೆ. ಕಾರಕೂನ ಬಂದು ಆರ್ಡರು ಪುಸ್ತಕವನ್ನು ಮುಂದಿರಿಸಿದ. ವಿಳಾಸ ಹಾಗೂ ಸಹಿಗೆ. ಬದರಿ ಧೈರ್ಯವಾಗಿ ಆ ಸಾಲುಗಳನ್ನು ತುಂಬಿದ.
ಸಾಹುಕಾರರು ತನ್ನ ಕೈ ಗಡಿಯಾರವನ್ನು ನೋಡಿದರು.
"ಈಗ ಯಾವ ಕಡೆಗೆ ಹೋಗ್ತೀರಿ?”
“ಕಾರವಾರಕ್ಕೆ.”
“ದಾಂಡೇಲಿಯಿಂದ ಹನ್ನೆರಡಕ್ಕೊಂಡು ಬಸ್ ಬರ್ತದೆ. ನಶೀಬ ಇದ್ರೆ ಸೀಟು ಸಿಗಬಹುದು.”
“ನೋಡ್ತೀನಿ.”
“ಸಿಗದೇ ಇದ್ದರೆ ಬರ್ರಿ. ಊಟಕ್ಕ ವ್ಯವಸ್ಥೆ ಮಾಡುವಾ.”