ಪುಟ:ನಾಸ್ತಿಕ ಕೊಟ್ಟ ದೇವರು.pdf/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬೬

ನಾಸ್ತಿಕ ಕೊಟ್ಟ ದೇವರು

"ಆಗಲಿ. ನಮಸ್ಕಾರ."
"ಹ್ಞ-ಹ್ಞ-" ಜೀವಮಾನದಲ್ಲೆಂದೂ ಯಾರಿಗೂ ಆತ ನಮಿಸಿಯೇ ಇಲ್ಲವೇನೋ ಎನ್ನುವ ಹಾಗೆ.
ನಿರೂಪ ಪಡೆದ ಬದರಿ ಬಸ್ ನಿಲ್ದಾಣಕ್ಕೆ ಧಾವಿಸಿದ. ಆ ದಿನದ ಮಟ್ಟಿಗೆ ಅವನಿಗಿದ್ದುದು 'ಖೊಟ್ಟಿ ನಸೀಬ.' ಹೊಟ್ಟೆ ಚುರ್ ಚುರ್ ಎನ್ನುತ್ತಿತ್ತು. ಎಂಟು ನೂರ ಐವತ್ತು ತೆತ್ತಾಯಿತು. ಒಂದು ಊಟ ಪ್ರತಿಯಾಗಿ ಪಡೆದರೆ ತಪ್ಪಲ್ಲ-ಅದೂ ಆ ಕಾಡಿನಲ್ಲಿ ಬೇರೆ ಅಂಗಡಿಗಳಾಗಲೀ ಮನೆಗಳಾಗಲೀ ಕಾಣಿಸದೇ ಇರುವಾಗ, ಎನ್ನುತ್ತ ಬದರಿ ನಿಧಾನವಾಗಿ ಅಡ್ಡೆಗೆ ಹಿಂತಿರುಗಿದ.
ಮಧ್ಯಾಹ್ನದ ವಿರಾಮವೆಂದು ಕಾರ್ಯಾಗಾರವೀಗ ನಿರ್ಜನವಾಗಿತ್ತು.
ಚಪ್ಪರದಲ್ಲಿದ್ದುದು ಕಾವಲುಗಾರನೊಬ್ಬನೇ.
ಅವನೆಂದ:
"ಹನ್ನೆರಡಾಯ್ತು, ಇನ್ನು ಮಾರಾಟವಿಲ್ಲ."
ಕೊಳ್ಳುವ ಕೆಲಸವನ್ನು ತಾನಾಗಲೇ ಮುಗಿಸಿರುವೆನೆಂದು ಬದರಿ ವಿವರಿಸಿದ. ಕುರ್ಚಿಯಲ್ಲಿ ಕುಳಿತಿರಲು ಸಮ್ಮತಿ ದೊರೆಯಿತು.
"ಇನ್ನು ಮೋಟಾರು ನಾಲ್ಕೂವರೆಗೆ," ಎಂದ ಕಾವಲುಗಾರ.
ಬದರಿ ಕೇಳಿದ:
"ಇಲ್ಲಿ ಊಟ ಎಲ್ಲಿ ಸಿಗುತ್ತಪ್ಪ?"
"ಈ ಊರಲ್ಲಿ ಖಾನಾವಳಿ ಇಲ್ರೀ. ಹ್ವಾರೆ ಮಂದಿ ಬುತ್ತಿ ತರ್ತಾರೆ."
ಹತ್ತಿರದಲ್ಲಿದ್ದ ಹಸುರು ಮನೆಯೊಳಗೆ ಜನರಿದ್ದಂತೆಯೇ ತೋರಲಿಲ್ಲ.
ಸಾಹುಕಾರರು ಊಟದ ವ್ಯವಸ್ಥೆ ಮಾಡುವಾ ಎಂದಿದ್ದರೆಂದು ತಿಳಿಸಲು, ಬದರಿಯ ಸ್ವಾಭಿಮಾನ ಅಡ್ಡಿಯಾಯಿತು. ಕಪ್ಪಿಟ್ಟ ಮುಖದೊಡನೆ ಆತ ಕುಳಿತ.
ಅಷ್ಟರಲ್ಲಿ ಹಸುರು ಮನೆಯ ಮೇಲಣ ಅಂತಸ್ತಿನಲ್ಲಿ ಸಾಹುಕಾರರು ಕಾಣಿಸಿಕೊಂಡರು. ಅವರೀಗ ತೊಟ್ಟಿದ್ದುದು ಅಡ್ಡಪಂಚೆ ಮತ್ತು ಬರಿಯ ಬನೀನು. ಅವರ ಕೈಯಲ್ಲೊಂದು ನೀಳವಾದ ಲೋಟವಿತ್ತು. ಅದರಿಂದ ತುಸು ತುಸುವಾಗಿ ದ್ರಾವಕವನ್ನೇನೋ ಕುಡಿಯುತ್ತ, ದೃಷ್ಟಿ ಹರಿಯುವವರೆಗೂ ತಮ್ಮ ರಾಜ್ಯವನ್ನು ದಿಟ್ಟಿಸಿ ನೋಡುತ್ತ, ಅವರು ನಿಂತರು.