ಪುಟ:ನಾಸ್ತಿಕ ಕೊಟ್ಟ ದೇವರು.pdf/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸ್ವಸ್ತಿ ಪಾನ

೬೭

ಮಹಡಿಯ ಜಗಲಿಯಲ್ಲೊಂದು ಕುರ್ಚಿಯಿತ್ತು. ಅದನ್ನೆಳೆದು ಕುಳಿತರು. ಲೋಟದಲ್ಲಿದ್ದುದನ್ನು ಕುಡಿಯುತ್ತಲಿದ್ದಂತೆ ಒಬ್ಬರೇ ಮಾತನಾಡುವುದಕ್ಕೂ ಅವರು ಆರಂಭಿಸಿದರು. ಎಂಥ ಮಾತುಗಳು! ಅಶ್ಲೀಲವೆನಿಸುವ ಭೀಭತ್ಸವೆನಿಸುವ ಬೈಗುಳ. ಎದ್ದು ನಿಂತು ಕಣ್ಣಿಗೆ ಬಿದ್ದ ಆಳುಗಳನ್ನು ಅವರು ಹತ್ತಿರಕ್ಕೆ ಕರೆದರು. ಹೀನಾಯವಾಗಿ ಅವರನ್ನು ಜರೆದರು. ಬಳಸಿದ ಪದಗಳೋ ತುಚ್ಛತಮ!
ನೋಡುತ್ತಲಿದ್ದ ಕೇಳುತ್ತಲಿದ್ದ ಬದರಿ ದಂಗಾಗಿ ಹೋದ. ಸ್ವಲ್ಪವೇ ಹೊತ್ತಿಗೆ ಮುಂಚೆ ತಾನು ಸಂಧಿಸಿದ ಭವ್ಯ ವ್ಯಕ್ತಿ ಈತನೇ ಏನು? ಇದೆಂತಹ ಹೊಸ ಅವತಾರ? ಯಾವ ಬಗೆಯ ನಾಟಕ ಇದು?
ಪೆಚ್ಚಾಗಿ ಯೋಚಿಸುತ್ತಿದ್ದ ಬದರಿ ಸಾಹುಕಾರರ ಕಣ್ಣಿಗೆ ಬಿದ್ದ. ಬರಿದಾಗಿದ್ದ ಲೋಟವನ್ನು ಅವರು ಅಂಗಳಕ್ಕೆ ಎಸೆದರು. ಕಂಪಿಸುವ ಕೀರಲು ಧ್ವನಿಯಲ್ಲಿ ಸುತ್ತಮುತ್ತಲ ಪ್ರದೇಶಕ್ಕೆಲ್ಲ ಕೇಳಿಸುವಂತೆ ಕಾವಲುಗಾರನನ್ನು ದೇಶಿಸಿ ಅವರೆಂದರು:
"ಲೋ ನಾಯಿ ಮಗನೆ! ಯಾರನ್ನು ಒಳಗೆ ಬಿಟ್ಟದೀಯೋ! ಕಳಿಸೋ ಅವನನ್ನು! ಕತ್ತು ಹಿಡಿದು ದಬ್ಬೋ ಹೊರಗೆ!”
ಬದರಿ ಧಿಗ್ಗನೆದ್ದು ನಿಂತ. ಕಾವಲುಗಾರ ಮಾತ್ರ ನಿಶ್ಚಲನಾಗಿದ್ದ. ಶಾಂತ ಸ್ವರದಲ್ಲಿ ಮೆಲ್ಲನೆ ಅವನೆಂದ:
"ನೀವು ಹೋಗಿಬಿಡಿ. ಹನ್ನೆರಡು ಆದ ಮೇಲೆ ಸಾಹುಕಾರ್ರು ಯಾವಾಗಲೂ ಹೀಗೆಯೇ. ಮೋಟಾರ್ ಸ್ಟಾಂಡಿನ ಹತ್ತಿರ ರುಕ್ಮಾಬಾಯಿಾದು ಚಾದುಕಾನ ಉಂಟು. ಅಲ್ಲಿ ನಿಮಗೆ ಚಾ ಸಿಕ್ಕಾತು..."
ಬದರಿ ,ಉರಿಯತೊಡಗಿದ ಅರಗಿನ ಮನೆಯಿಂದ ಓಡುವವನಂತೆ ಬೇಗ ಬೇಗನೆ ಹೆಜ್ಜೆ ಇಡುತ್ತ ಅಲ್ಲಿಂದ ನಡೆದ. ಸಾಹುಕಾರರ ಮಾತು ಕೇಳಿಸದಷ್ಟು ದೂರ ಆತ ಹೋದ ಮೇಲೂ ಆ ಪದಗಳು ಮಾತ್ರ ಆತನ ಕಿವಿಯಲ್ಲಿ ಮೊರೆಯುತ್ತಲೇ ಇದ್ದುವು.

ರುಕ್ಮಾಬಾಯಿಯ ಚಾ ಕಷಾಯವನ್ನು ಕುಡಿಯುವ ಧೈರ್ಯ ಬದರಿಗಾಗಲಿಲ್ಲ. ಬದಲು ಒಂದು ಡಜನ್ ಮಿಟ್ಲೆ ಬಾಳೆಹಣ್ಣು ತಿಂದು, ಒಂದು ಪಾಕೆಟ್ ಹನಿಡ್ಯೂವನ್ನು [ಅದೇ ಅಲ್ಲಿ ದೊರೆಯುತ್ತಿದ್ದ ಅತ್ಯುತ್ತಮ ಸಿಗರೇಟು] ಒಂದರ ಮೇಲೊಂದಾಗಿ ಸೇದಿದ.