ಪುಟ:ನಾಸ್ತಿಕ ಕೊಟ್ಟ ದೇವರು.pdf/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬೮

ನಾಸ್ತಿಕ ಕೊಟ್ಟ ದೇವರು



ಮೂರು ಘಂಟೆಯ ಸುಮಾರಿಗೆ ಕಾರವಾರಕ್ಕೆ ಹೊರಟಿದ್ದ ಒಂದು ಟ್ರಕ್ ದಾಂಡೇಲಿಯಿಂದ ಬಂತು. ಅದರಲ್ಲಿ ಡ್ರೈವರನ ಎಡಕ್ಕೆ ನಾಲ್ಕನೆಯವನಾಗಿ ಬದರಿ ಆ ಊರು ಬಿಟ್ಟ.
ಕಾರವಾರವನ್ನು ತಲುಪಿದ ಮೇಲೆ ಆತ ಮಾಡಿದ ಮೊದಲ ಕೆಲಸವೆ೦ದರೆ ಮೈಗಂಟಿದ ಕೊಳೆಯನ್ನು ತೊಳೆಯುವ ಸ್ನಾನ. ಅದಾದೊಡನೆ ಹೊಟ್ಟೆ ತುಂಬ ತಿಂಡಿ. ಅನಂತರ ತನ್ನೂರಿನ ಪರಿಚಯದ ಫರ್ನೀಚರ್ ಮಾರ್ಟಿನವರಿಗೆ ಒಂದು ಕಾಗದ. “ಆಶ್ಚರ್ಯಕರವಾದ ಹತ್ತು ಹಲಗೆಗಳನ್ನು [೩'×೬'] ಕೊಂಡು ರವಾನಿಸಿದ್ದೇನೆ. ರೈಲ್ವೆಫ್ರೇಯಿಟ್ ಕೊಟ್ಟು ಪಾರ್ಸೆಲ್ ಬಿಡಿಸಿಕೊಳ್ಳಿ. ನಾನು ಬಂದ ಮೇಲೆ ಅದರ ವಿಲೇವಾರಿ."
ಆ ಸಂಜೆಯೇ ಬದರಿ ತನ್ನ ವ್ಯಾಪಾರೀ ಮಿತ್ರನನ್ನು ಕಂಡ.
"ಹಲಗೆ ಚೆನ್ನಾಗಿತ್ತು. ಹತ್ತು ತಗೊಂಡ್ಬಿಟ್ಟೆ. ಗಿರಾಕಿಗಳಿದ್ದಾರೆ. ಇಮ್ಮಡಿ ಬೆಲೆಗೆ ಮಾರಬಹುದು.”
ಬದರಿಯ ಈ ಮಾತನ್ನು ನಂಬಲು ಮನಸಾಗಲಿಲ್ಲವಾದರೂ, ಇದ್ದರೂ ಇರಬಹುದೆಂದು ಆತ ಸುಮ್ಮನಾದ.
ಬದರಿಯ ಒಳಗಿನ ಬೇಗುದಿ ಹಾಗೆಯೇ ಇತ್ತು. ಅವನೆಂದ:
"ಹನ್ನೆರಡಕ್ಕೆ ಮುಂಚೆಯೇ ವ್ಯಾಪಾರ ಮುಗೀಬೇಕೂಂತ ನೀವು ಹೇಳಿದ್ದು ಅರ್ಥವಾಯ್ತು. ಅಲ್ರೀ, ಸಾಹುಕಾರ್ರು ಕುಡುಕನೇನ್ರಿ?"
"ಯಾತರ ಮೇಲಿಂದ ಹೇಳ್ತೀರಿ?"
"ಕಣ್ಣಾರೆ ಕಂಡದ್ದರ ಮೇಲಿಂದ. ಇಷ್ಟುದ್ದದ ಲೋಟ ಕೈಲಿ ಹಿಡಕೊಂಡಿದ್ರು."
"ಅದರಲ್ಲೇನಿತ್ತು ಅಂದ್ಕೊಂಡ್ರಿ?"
"ಏನು?"
"ನೀವು ಹೇಳಿ."
"ರಮ್ಮೆ?"
"ಅಲ್ಲ!"
“ಮೆಶಿರಾ?”
“ ಊಹೂಂ, ಸೋತಿರಿ. ಬನ್ನಿ, ಹೊರಗೆ ಹೋಗೋಣ. ನಿಧಾನವಾಗಿ ಹೇಳ್ತೀನಿ.”