ಪುಟ:ನಾಸ್ತಿಕ ಕೊಟ್ಟ ದೇವರು.pdf/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಾಸ್ತಿಕ ಕೊಟ್ಟ ದೇವರು

ಇನ್ನೇನು ತಿರುಗಬೇಕೆನ್ನುವಷ್ಟರಲ್ಲೆ “ಅಯ್ಯೋ ಸತ್ತೆ! ಮಾರಿಬಡಿಯ ನಿಂಗೆ! ನಿನ್ ಕೈ ಕತ್ತರಿ ಹೋಗ ! ಅಯ್ಯೋ ಅವ್ವಾ!...”ಎಂಬ ಕೂಗು ಕೇಳಿಸಿತು. ಯಾತನೆಯ ಆಲಾಪನೆ ಮಾಡುತ್ತಿದ್ದ ಬಲುಬಳಲಿದ ಸ್ವರ...

ಸೀತಾಪತಿ ಶಿಲಾಪ್ರತಿಮೆಯ೦ತೆ ಅಲ್ಲೇ ನಿ೦ತ.

ನೋವಿನ ನರಳಾಟದೊಂದಿಗೆ ಒಂದು ಸ್ವರ ಕೂಗಾಡುತಿತ್ತು :

"ಕೆಟ್ಟ ರಂ-! ಮುದುಕಪ್ಪ ಕಣ್ ಕಾಣಿಸ್ದೆ ಬಿದ್ದವ್ನೆ, ಉಡುಗ್ರುಅಸಿದವೆ. ಜರಾ ಬಂದು ನಾನು ಸಾಯ್ತಿದ್ರೆ, ಅಬ್ಬ ಇವ್ಳ ಸೊಕ್ಕೆ!ಹಳ್ಳಿಗೆ ಓತಾಳಂತೆ... ಊರ್ಗೆ ಓಗ್ಗೇಕಂತೆ ... ಹೂಂ!”

ಸೀತಾಪತಿಯ ಮುಖ ಕಪ್ಪಿಟ್ಟಿತು. ಮತ್ತೆ ಅದೇ ಕತೆ. ಆ ಗುಡಿಸಲಿನತ್ತ ಸಾಗೋಣ ಎ೦ದಿತು ಮನಸ್ಸು. ಆದರೆ ಆತ ಏನುಮಾಡಬಲ್ಲ?ಎಂಥ ಪರಿಹಾರ ಸೂಚಿಸಬಲ್ಲ? ಏನು ಸಹಾಯ ನೀಡಬಲ್ಲ? ಮನಸ್ಸುಹಿಂಜರಿಯಿತು. ಶರೀರ ಕದಲಲಿಲ್ಲ.

ಅಲ್ಲೇ ಪಕ್ಕದಲ್ಲೇ ಇರಬೇಕು ಆ ಗುಡಿಸಲು. ಹೌದು, ಆ ಜಾಗದಿಂದಲೇ ಅವರ ಕೇರಿ ಆರಂಭವಾಗುವುದು. ಆ ಸಂಭಾಷಣೆಯ ಹಿಂದಿನವ್ಯಕ್ತಿಗಳನ್ನು, ಆ ವಾತಾವರಣವನ್ನು, ಸೀತಾಪತಿ ಚಿತ್ರಿಸಿಕೊಂಡ. ಮಗಸೊಸೆಯರ ಜಗಳದೆಡೆಯಲ್ಲಿ ಮೂಕನಾಗಿ ಮೌನದ ಕಣ್ಣೀರು ಸುರಿಸುವಕುರುಡು ತಂದೆ. ಮಲೆ ಜ್ವರ ಹಿಡಿದು ಕೃಶನಾಗಿ ಕೊಳಕು ಕಂಬಳಿಯೊಳಗೆಮುದುಡಿ ಮಲಗಿರುವ ಯಜಮಾನ ... ಹಳ್ಳಿಗೆ ಹೊರಟು ಹೋಗೋಣವೆಂದು ಹಂಬಲಿಸುತ್ತಿರುವ, ಯೌವನದಲ್ಲೇ ಮುಪ್ಪು ಕಂಡ, ಆ ಹೆಣ್ಣು... ಭೀತರಾಗಿ ಮೂಲೆಯಲ್ಲಿ ಅವಿತಿರುವ ಪುಟಾಣಿ ಮಕ್ಕಳಿಬ್ಬರು...

ಸೀತಾಪತಿಯ ಕಾಲುಗಳು ಅವನ ಸ್ನೇಹಿತನ ಮನೆಯತ್ತ ಚಲಿಸಿದುವು. ಸೀದುಹೋಗಿತ್ತು ಹೃದಯ. ಬಿರಿಯುವ ಭೀತಿ ತೋರಿಸುತ್ತಮೆದುಳು ಗುಡುಗುಟ್ಟತಿತ್ತು.

ಮನೆಯ ಮೆಟ್ಟಲೇರಿದಾಗಲೇ ಎದುರಿನ ನಿಲುವುಗನ್ನಡಿ ಅವನ ಪ್ರತಿಬಿಂಬವನ್ನು ತೋರಿತು. ಸೀತಾಪತಿ ಕಂಡುದು ತನಗೇ ಅರ್ಥವಾಗದಂಥಒಂದು ಮುಖಮುದ್ರೆ. ತುಟಿಗಳು ಬಿಗಿದುಕೊಂಡಿದ್ದುವು. ಹಣೆ ನೆರಿಗೆಕಟ್ಟಿತ್ತು. ಕೆನ್ನೆಯ ಎಲುಬುಗಳು ಎದ್ದು ಕಾಣಿಸುತ್ತಿದ್ದುವು. ಶೀಘ್ರಗತಿಯಿಂದ ಬಿಳಿ ಬಣ್ಣಕ್ಕೆ ತಿರುಗುತ್ತಿದ್ದ ತೆಳ್ಳಗಿನ ನೀಳವಾದ ತಲೆಗೂದಲು ...