ಪುಟ:ನಾಸ್ತಿಕ ಕೊಟ್ಟ ದೇವರು.pdf/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಾಸ್ತಿಕ ಕೊಟ್ಟ ದೇವರು

ಕಲಾವಿದ ಸೀತಾಪತಿ ಆರಾಮ ಕುರ್ಚಿಯ ಮೇಲೆ ಕುಳಿತು ಕಾಲು ನೀಡಿದ. ಪೈಪ್ ಹೊರತೆಗೆದು, ತಂಬಾಕು ತುಂಬಿಸಿ, ಕಡ್ಡಿಗೀರಿದ. ಇಲ್ಲ, ಪೈಪನ್ನೆಷ್ಟು ಚೀಪಿದರೂ ಕದಡಿ ಹೋದ ಮನಸ್ಸಿನ ನೆಮ್ಮದಿ ಮರಳಿ ಬರ ಲಿಲ್ಲ. ಆ ಸಂಭಾಷಣೆ ಪ್ರತಿಧ್ವನಿಸುತ್ತಿತ್ತು. ಅದರ ಹಿಂದಿನ ಚಿತ್ರ ಕಣ್ಣಿಗೆ ಕಟ್ಟುತ್ತಿತ್ತು.

–ಆ ಬಡ ರೈತ ಕುಟುಂಬಕ್ಕೆ ಹಳ್ಳಿಗೆ ಹೋಗಬೇಕೆಂಬ ಆಸೆಯಿದೆ- ಬಲವತ್ತರವಾದ ಆಸೆ. ಅವರು 'ಅಡ್ವಾನ್ಸ್' ಇಸಕೊಂಡಿದ್ದಾರೆ. ಕಾಗದ ಗಳಿಗೆ ಹೆಬ್ಬೆಟ್ಟಿನ ಮುದ್ರೆಯೊತ್ತಿದ್ದಾರೆ. ಹೆಂಡದಂಗಡಿಯಲ್ಲಿ, ದಿನಸಿ ಅಂಗಡಿಯಲ್ಲಿ, ಅವರಿಗೆ ಸಾಲವಾಗಿದೆ. ಅವರನ್ನು ಅಲ್ಲಿಗೆ ಕರೆದು ತಂದ ಮೇಸ್ತ್ರೀಯೇ ಅವರ ಪಾಲಿನ ಪರದೈವ. ಆ ತೋಟದಿಂದ ಬಿಡುಗಡೆಯಾಗ ಬೇಕಾದರೆ ಅತ ಕರುಣಿಸಬೇಕು...

ಅಂಥ ಯೋಚನಾಸರಣಿಯಲ್ಲಿ, ಆ ಹೆಣ್ಣಿನ ಚಿತ್ರವೊಂದೇ ಕ್ರಮಶಃ ರೂಪುಗೊಂಡು ಸೀತಾಪತಿಯ ಮನಸ್ಸಿನಲ್ಲಿ ಉಳಿಯಿತು. ಆ ಕಾಲುಗಳಿಗೆ ಬೇಡಿ ಹಾಕಿದ್ದಾರೆ... ಆದರೂ ಕುಳಿತಲ್ಲಿಂದಲೇ ಆಕೆ ಹುಟ್ಟೂರಿನತ್ತ ಕೈಚಾಚಿ ಹಂಬಲದ ದೃಷ್ಟಿ ಹರಿಸಿದ್ದಾಳೆ... ಅವಳೊಬ್ಬಳದೇ ಅಲ್ಲ ಆ ಆಶಯ. ತೋಟಗಳಲ್ಲಿ ದುಡಿಯಲೆಂದು ಬಯಲು ಭೂಮಿಯಿಂದ ಬರುವ ಎಲ್ಲ ಬಡಪಾಯಿಗಳ ಆಸೆಯ ಪ್ರತಿನಿಧಿ ಆಕೆ.

ಚಟುವಟಿಕೆಯಿಂದ ಸೀತಾಪತಿ ಎದ್ದುನಿಂತು, ಗೆಳೆಯ ತನಗಾಗಿಯೇ ತೆರವು ಮಾಡಿಸಿದ್ದ ಕೊಠಡಿಯತ್ತ ಸಾಗಿದ. ನರನಾಡಿಗಳಲ್ಲಿ ಚೈತನ್ಯ ಹರಿಯಿತು. ಕೈಬೆರಳುಗಳಲ್ಲಿ ಲವಲವಿಕೆ ತುಂಬಿತು. ಆ ಕಣ್ಣಗಳು ಮಿನುಗಿದುವು... ಸೀತಾಪತಿ ಮೃದುವಾದ ಮಣ್ಣಿನ ಮೇಲೆ ಕೈಯಾಡಿಸಿ ಅದನ್ನು ಹದಗೊಳಿಸಿದ.

...ಮುಂದೆ ಐದು ಗಂಟೆಗಳ ಕಾಲ ಒಂದೇ ಸಮನೆ ನಿರ್ಮಾಣ ಕಾರ್ಯದಲ್ಲಿ ಸೀತಾಪತಿ ನಿರತನಾದ. ಕೊನೆಯಲ್ಲಿ, ಹುಟ್ಟೂರಿನ ನೆಲ ಕ್ಕಾಗಿ ಹ೦ಬಲಿಸುವ ಒ೦ದಡಿ ಎತ್ತರದ ಹೆಣ್ಣು ಸಿದ್ಧವಾದಳು... ಕಾಲುಗಳಿಗೆ ಬೇಡಿ...ನೀಡಿದ ಕೈ...ಕಣ್ಣುಗಳಲ್ಲಿ ಆಸೆಯ ದೂರ ನೋಟ...