ಪುಟ:ನಾಸ್ತಿಕ ಕೊಟ್ಟ ದೇವರು.pdf/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೭೮

ನಾಸ್ತಿಕ ಕೊಟ್ಟ ದೇವರು

ತನ್ನೊಬ್ಬನಿಂದಲೇ ಎನ್ನುವ ಹಾಗೆ. ಯೌವನದ ಹುಚ್ಚುಚ್ಚಾರ. ತಾನೂ ಒಮ್ಮೆ ಯುವಕನಾಗಿದ್ದೆ. ಗುಮಾಸ್ತೆಯಾಗಿ ಕೆಲಸಕ್ಕೆ ಸೇರಿ ಶಿರಸ್ತೇದಾರನಾಗಿ ನಿವೃತ್ತನಾದೆ. ಆದರೆ, ಮೈಸೂರು ಸರಕಾರ ನಡೆಯುತ್ತಿರುವುದು ತನ್ನಿಂದಲೇ ಅಂತ ಯಾವತ್ತಾದರೂ ಭ್ರಮಿಸಿದ್ದೆನೇನು? ಹುಡುಗು ಬುದ್ಧಿ...
ಛೆ, ಇದೇನು? ಪೂಜೆಗೆಂದು ಕುಳಿತರೆ, ಈ ಯೋಚನೆ ?
“ಲೇ ಅಡುಗೆ ಆಯ್ತೇನು?”
ತಾಯಿ ಮತ್ತು ಮಗಳು ನಕ್ಕರು. ಅಭ್ಯಾಸ ಬಲದಿಂದ ತಾನು ಆ ಪ್ರಶ್ನೆ ಕೇಳಿದೆನೆಂದು ಮೋಜೆನಿಸಿತ್ತು ಅವರಿಗೆ.

****

"ಇನ್ನಾದರೂ ಮಧ್ಯಾಹ್ನದ ಹೊತ್ತು ಊಟಮಾಡಬಾರದೆ?”
“ಆಗಲಿ ಆಗಲಿ...”
ಟ್ರಿಣ್, ಟ್ರಿಣ್ ... ಸೈಕಲ್ ಬೆಲ್. ಪೂಜೆ ಮುಗಿಸಿ ಹೊರಬಂದ ವಿಶ್ವನಾಥಯ್ಯನವರ ಕೈಗೆ ಪೇಪರ್ ಸಿಕ್ಕಿತು. ಪ್ರಸಾದ ಬಿ. ಇ. ಮುಗಿಸಿ ಉದ್ಯೋಗ ದೊರೆತು ಉತ್ತರ ಭಾರತಕ್ಕೆ ಹೋಗಿ, ಹಣ ಕಳುಹತೊಡಗಿದಂದಿನಿಂದ ಈ ಪತ್ರಿಕೆ ಬರುತ್ತಿತ್ತು. ಸಾಹೇಬರು ತರಿಸುತ್ತಿದ್ದುದು ಮದರಾಸಿನ ಆ ಪತ್ರಿಕೆಯನ್ನೇ. ಹೀಗಾಗಿ ವಿಶ್ವನಾಥಯ್ಯನವರೂ "ಅದೇ ಸರಿ” ಎಂದಿದ್ದರು . . .
" ಅಣ್ಣಯ್ಯ, ನರಸಿಂಗರಾಯರ ಮೊಮ್ಮಗ ಬಂದಿದ್ಧಾನೆ. ಪೇಪರ್ ಬೇಕಂತೆ.”
ಸಾಕಷ್ಟು ಹಿರಿಯ ಹುದ್ದೆಯಲ್ಲಿದ್ದು ನಿವೃತ್ತನಾದ ಮನುಷ್ಯ ಆತ. ಅದೇ ಬೀದಿಯಲ್ಲಿ ಮನೆ ಕೊಂಡುಕೊಂಡು ತಳವೂರಿದ್ದರು. ಬೇಕಷ್ಟು ದುಡ್ಡಿದ್ದ, ದುಡ್ಡು ಮಾಡಿದ್ದ, ವ್ಯಕ್ತಿ. ಆದರೆ ಪರಮ ಲೋಭಿ.
"ಈಗ ನಾನೂ ಮನೇಲೇ ಇದೀನಿ ಅ೦ತ ಹೇಳಿ ಕಳಿಸು !”
ಪಕ್ಕದ ಮನೆಯ ಪತ್ರಿಕೆಯಿಂದಲೇ ಇವರ ಪ್ರಪಂಚಜ್ಞಾನ ವೃದ್ಧಿಯಾಗಬೇಕು, ಹು೦ !