ಪುಟ:ನಾಸ್ತಿಕ ಕೊಟ್ಟ ದೇವರು.pdf/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೮೦

ನಾಸ್ತಿಕ ಕೊಟ್ಟ ದೇವರು

ಇಂತಹ ಪರಿಸ್ಥಿತಿ ಒದಗುತ್ತಿತ್ತೆ? ಮದುವೆಯ ಮಾರುಕಟ್ಟೆಗೆ ಇಂಟರ್ ಮೀಡಿಯೆಟ್ ಕನಿಷ್ಠ ವಿದ್ಯೆ ಅಂತ ಓದಿಸಿದ್ದಾಯ್ತು. ಗಿರಾಕಿ ಕುದುರಲಿಲ್ಲಿ ಮನೆಯಲ್ಲಿದ್ದು ಮಾಡುವುದೇನು ಅಂತ ಮುಂದೆಯೂ ವಿದ್ಯಾಭ್ಯಾಸ. ಪದವೀಧರೆ ಹೆಣ್ಣು. ಪದವೀಧರನಾದ ಗಂಡೇ ಬೇಕು ತಾನೇ?
ಎಂಥ ವಿಚಾರಗಳು ಈಗೆಲ್ಲ! ವಿವಾಹ ವಿಚ್ಛೇದನಕ್ಕೆ ಅವಕಾಶವಿದೆ ನಮ್ಮಲ್ಲಿ. ಆದರೆ ವಿವಾಹಕ್ಕೆ ಅವಕಾಶವಿಲ್ಲ. ಆಸ್ತಿಯಲ್ಲಿ ಗಂಡುಮಕ್ಕಳು ಹೆಣ್ಣಮಕ್ಕಳು ಇಬ್ಬರಿಗೂ ಸಮಪಾಲು. ಹಂಚುವುದಕ್ಕೆ ಆಸ್ತಿ ಮಾತ್ರ ನಾಸ್ತಿಯೆ!
ಮಗಳನ್ನೊಮ್ಮೆ ಸಾಗಹಾಕಿ ಕನ್ಯಾಸೆರೆ ಬಿಡಿಸಿಕೊಂಡು, ಸೊಸೆಯೊಬ್ಬಳನ್ನು ಮನೆಗೆ ತರುವಂತಾದರೆ–
ಸುತ್ತಮುತ್ತೆಲ್ಲ ಸಾಗರ. ನಡುಗಡ್ಡೆಯ ಮೇಲೆ ನಿಂತು ವಿಶ್ವನಾಥಯ್ಯ ಯೋಚಿಸಿದ್ದರು: ಈ ಜಲರಾಶಿಯನ್ನು ದಾಟಿ ದಂಡೆಯನ್ನು ಹೇಗೆ ಸೇರಲಿ? ಹೇಗೆ ಸೇರಲಿ?
ಒಳಬಾಗಿಲಲ್ಲಿ ನಿಂತು ಗಂಡನನ್ನು ಉದ್ದೇಶಿಸಿ ಅವರಾಕೆ ಅಂದರು :
" ಸ್ವಲ್ಪ ಹೊತ್ತು ಮಲಗಿ ವಿಶ್ರಾಂತಿನಾದರೂ ತಗೋಬಾರದೆ ? "
ಹಗಲು ಹೊತ್ತು ನಿದ್ದೆ. ಎಂದೂ ಮಾಡದಿದ್ದವರು ಇನ್ನು ಈ ಕಡೆಗಾಲದಲ್ಲಿ . . .
“ ಛೆ! ಛೆ!” ಎಂದರು ವಿಶ್ವನಾಥಯ್ಯ, ಮೈಮೇಲೆ ಎರಗಬಯಸಿದ ನೊಣವನ್ನು ಝಾಡಿಸುವವರಂತೆ.
ಅವರು ಎದ್ದು ಶತಪಥ ತುಳಿದರು. ಕೋಟು ಅವರನ್ನು ಅಣಕಿಸಿತು. ಬಡ ಸೈಕಲು ಅವರೆಡೆಗೆ ಕಾತರದ ನೋಟ ಬೀರಿತು.
ಕಪಾಟದ ಬಳಿ ನಿಂತು ಗೊತ್ತು ಗುರಿ ಇಲ್ಲದೆ ಕದ ತೆರೆದಾಗ 'ಗೀತಾ ರಹಸ್ಯ'ದ ಒಂದು ಪ್ರತಿ ವಿಶ್ವನಾಥಯ್ಯನವರ ಕಣ್ಣಿಗೆ ಬಿತ್ತು. ಒಂದು ವರ್ಷದ ಹಿಂದೆ ಕೊಂಡು ತಂದಿದ್ದರೂ ಓದಲು ಬಿಡುವು ದೊರೆತಿರಲಿಲ್ಲ. ಈಗ ಓದೋಣವೆಂದು ಕೈಗೆತ್ತಿಕೊಂಡು ಮಂಚದ ಮೇಲೆ ಪವಡಿಸಿದರು. ಅಲ್ಲಿಯೇ ಅವರಿಗೆ ಜೊಂಪುಹತ್ತಿತು.

****