ಪುಟ:ನೋವು.pdf/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೬ ನೋವು ಒಬ್ಬ ಲಾಯರ್ ಬಂದುದು ಭಾಗೀರಥಿಗೆ ನೆನಪಿತ್ತು, ಆತ ಶಾನುಭೋಗರ ಮನೆಯಲ್ಲೇ ಇಳಿದುಕೊಂಡಿದ್ದರು, ಒಂದು ಹೊತ್ತಿನ ಮಟ್ಟಿಗೆ. ಕಪ್ಪು ಕೋಟು, ಬಿಳಿಯ ಪೇಟ, ಭಾಗೀರಥಿಗೆ ಅವರನ್ನು ನೋಡಿ ಭಯವಾಗಿತ್ತು, "ಬಾ ಮಗೂ,” ಎಂದು ಅವರು ಎಷ್ಟು ಕರೆದರೂ ಭಾಗೀರಥಿ ಅವರ ಹತ್ತಿರಕ್ಕೆ ಹೋಗಿರಲಿಲ್ಲ. ಅವರ ಮಗಳೇ ಇರಬಹುದೇ? ಆದರೆ ಅದು ಹದಿನಾಲ್ಕು, ಹದಿನೈದು ವರ್ಷಗಳಿಗೆ ಹಿಂದಿನ ಮಾತು. ಆಗ ಆ ಲಾಯರಿಗೆ ಎಷ್ಟು ವಯಸಾಗಿತ್ತೊ? ಅವಳು ಬಲ್ಲಳು: ಚಿಕ್ಕಮಕ್ಕಳ ದೃಷ್ಟಿಯಲ್ಲಿ ದೊಡ್ಡವರಿಗೆಲ್ಲ ಒಂದೇ ವಯಸ್ಸು..... ಅವರೇ ಯಾಕಿರಬೇಕು ? ನಗರದಲ್ಲಿ ಎಷ್ಟೊಂದು ಲಾಯರುಗಳೋ ಏನೋ... ಲಾಯರ ಮಗಳು. ಉ‍ಃ ! ವಿದ್ಯಾವಂತ ಹುಡುಗಿ ಅಂತ ದೊಡ್ಡಮ್ಮ ಅದೇನೋ ಅಂದರಲ್ಲ ? ಟಿಸ್ ಪಿಸ್ ಇಂಗ್ಲಿಷ್ ಮಾತಾಡೋದಕ್ಕೆ ಗೊತ್ತಿರಬಹುದು. ಪದ್ಮನಿಗೆ ಅವಳೇ ಹೆಂಡತಿಯಾದರೆ ಅವರಿಬ್ಬರೂ ಇಂಗ್ಲಿಷಿನಲ್ಲಿ ಮಾತಾಡಿ ತನ್ನನ್ನು ಗೇಲಿ ಮಾಡಬಹುದು. ಎಲ್ಲ ವ್ಯವಹಾರವೂ ಇಂಗ್ಲಿಷಿನಲ್ಲೇ, ತನಗೇನೂ ತಿಳಿಯುವಂತಿಲ್ಲ. ದೊರೆಸಾನಿ. ಆಕೆಯೂ ಆತನೂ ಏಕಾಂತದಲ್ಲಿದ್ದಾಗ, ಅದೂ ಇದೂ ಮಾಡುವಾಗ ಆಗಲೂ ಇಂಗ್ಲಿಷಿನಲ್ಲೇ ಮಾತಾಡುವರೇನೋ....

     ತಾನು ಮನೆಯ ಹಿರಿಯ ಸೊಸೆ, ಬರುವವರು ಶ್ರೀಮಂತ ಪುತ್ರಿಯರಾದರೇನಾಯಿತು ? ವಿದ್ಯಾವತಿಯರಾದರೇನಾಯಿತು? ಅವರು ಕಿರಿಯ ಸೊಸೆಯಂದಿರು. ದೊಡ್ಡಮ್ಮ ಇರುವ ತನಕ ಅವರ ಹಿರಿತನ ಎಲ್ಲರಿಗೂ ಮಾನ್ಯ. ಅವರ ಅನಂತರ, ತನ್ನ ಅತ್ತೆ ಇಲ್ಲದ ಕಾರಣ ತಾನೇ ಮನೆಗೆ ಒಡತಿ, ಉಳಿದವರು ತನ್ನ ಮಾತು ಕೇಳಬೇಕು.
     ಕೇಳದೇ ಇದ್ದರೆ...? 
     ಇದ್ದಕ್ಕಿದ್ದಂತೆ ಭಾಗೀರಥಿಗೆ ತಾನು ಅಸಹಾಯಳು ಏಕಾಕಿನಿ ಅಬಲೆ ಎನಿಸಿತು. ಗಂಡನಿಗೋ ದುಡಿಮೆಯಾಯಿತು, ತಾನಾಯಿತು. ಹೆಂಡತಿಯಾದವಳು ಹೇಳುವ ಮಾತನ್ನು ಇಷ್ಟು ಆಲಿಸಬೇಕು ಎಂಬ ವವೇಚನೆಯಾದರೂ ಬೇಡವೆ?
     ಭಾಗೀರಥಿಗೆ ತನ್ನ ತಾಯಿಯ ನೆನಪಾಯಿತು, ತಂದೆಯ ನೆನಪಾಯಿತು. ಅವರ ಸಲಹೆಯನ್ನಾದರೂ ಪಡೆಯಬಹುದಿತ್ತು ತಾನು ಸೋಮಪುರಕ್ಕೆ ಹೋಗುವುದು ಸಾಧ್ಯ ವಿದ್ದಿದ್ದರೆ. ಆದರೆ ಈ ವರ್ಷ ಅದು ಆಗದ ಮಾತು.
     ಮದುವೆಗಳೇನಾದರೂ ನಿಷ್ಕರ್ಷೆಯಾಗಿ ಬೇಗನೆ ನಡೆಯಲು ಏರ್ಪಾಟಾದರೆ, ಆಗ ತನ್ನ ತಂದೆ ತಾಯಿ ಕಣಿವೇಹಳ್ಳಿಗೆ ಬರಲೂಬಹುದು. ಮದುವೆಗಳು ನಗರದಲ್ಲಿ ಎಂದಾದರೆ ಅಲ್ಲಿಗೆ ಬರುವರೋ ಇಲ್ಲವೋ. ಬನ್ನಿ ಎಂದು ಆಗ್ರಹಿಸಿ ತಾನೊಂದು ಕಾಗದ ಬರೆಯಬೇಕು.
     ಟಿಸ್ ಪಿಸ್ ವಿದ್ಯಾವತಿಯಲ್ಲ ನಿಜ. ಆದರೆ, ಒಂದು ಕಾಗದ ಬರೆಯುವಷ್ಟು ವಿದ್ಯೆ ಶಾನುಭೋಗರ ಮಗಳಾದ ತನಗೆ ಇದೆ, ಇದೆ.
     ಸೋಮಪುರಕ್ಕಾದರೆ ಅಂಚೆಯವರು ಎರಡು ಸಲ ಬರುತ್ತಾನೆ; ಇಲ್ಲಿಗೆ ವಾರಕ್ಕೆ ಒಂದೇ ಸಲ. ಆದರೂ, ತಂದೆ ತನಗೆ ಒಂದು ಸಲವೂ ಬರೆದುದಿಲ್ಲ. ತಾನೂ ಬರೆದವಳಲ್ಲ. ತನ್ನ ಗಂಡನೂ ಬರೆದವನಲ್ಲ. ಏನಿದ್ದರೂ ಕ್ಷೇಮಸಮಾಚಾರದ ಪತ್ರ ವಿನಿಮಯ ವರ್ಷಕ್ಕೆ ಒಂದೆರಡು ಬಾರಿ ನಡೆಯುತ್ತಿದ್ದುದು, ಮಾವ ಹಾಗೂ ತಂದೆಯ ನಡುವೆ ಮಾತ್ರ.
    ಇನ್ನು ಕ್ರಮೇಣ ಕಣಿವೇಹಳ್ಳಿಯೂ ಸೋಮಪುರದ ಹಾಗಾಗುತ್ತದೆ. ಅಲ್ಲಿರುವ ಹಾಗೆ