ಪುಟ:ನೋವು.pdf/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ನೋವು ೧೧೭ ಇಲ್ಲಿಯೂ ಒಂದು ಹೋಟ್ಲು. ಮೈದುನ ಬೇರೆ ಟಾರು ರಸ್ತೆಯವರೆಗೆ ಗಾಡಿದಾರಿ ಮಾಡಿಸಬೇಕು ಎನ್ನುತ್ತಾನಲ್ಲ. ಟಾಂಗಾ ಇಡಬೇಕಂತೆ.

    ಮಲಗಿದ್ದ ಭಾಗೀರಥಿಯ ತುಟಿಗಳನ್ನು ಮಂದಹಾಸ ಅಲಂಕರಿಸಿತು. ಹಾಗೆಯೇ ಅವಳಿಗೆ ಮ೦ಪರು ಕವಿಯಿತು.
    ಆ ಹಗಲು ನಿದ್ದೆಯಲ್ಲೊಂದು ಕನಸು.
    ಎತ್ತರದ ಬಿಳಿಯ ಕುದುರೆ ಕಟ್ಟಿದ ಒಂದು ಟಾಂಗಾ. ಕುದುರೆಯ ಕಡಿವಾಣ ಹಿಡಿದು ಹೈ ಹೈ ಎನ್ನುತ್ತಿದ್ದವನು ಆಕೆಯ ಗಂಡ. ಅವನ ತೋಳುಗಳ ಮಾಂಸಖಂಡಗಳು ಪುಟಿಯುತ್ತಿವೆ. ಟಾಂಗಾದಲ್ಲಿ ತಾನು ಹಾಗೂ ಶ್ರೀಪಾದ. ಎಷ್ಟೊಂದು ವೇಗವಾಗಿ ಕಣಿವೇಹಳ್ಳಿಯ ರಸ್ತೆಗಳಲ್ಲೆಲ್ಲ ಟಾಂಗಾ ಧಾವಿಸುತ್ತಿದೆ ! ದಾರಿಗೆ ಅಡ್ಡವಾಗಿ ಬಂದ ಕೋಳಿಗಳು, ಹಂದಿಗಳು, ನಾಯಿಗಳು ದಿಕ್ಕಾಪಾಲಾಗಿ ಓಡುತ್ತವೆ. ಅವುಗಳ ಕೂಗಿನ ಜತೆಗೆ ಸಾಲುಗಟ್ಟಿ ನಿಂತ ಜನರ ಹರ್ಷಧ್ವನಿ.
    " ಅಮ್ಮಾವ್ರು ! ಅಮ್ಮಾವ್ರು !"
     ಅಷ್ಟರಲ್ಲಿ ಎರಡು ಪುರುಷ ಕಂಠಗಳಿಂದ ಕೇಳಿ ಬರುತ್ತದೆ:
     "ನಿಲ್ಸು ! ನಿಲ್ಸು !"
     ತನ್ನ ಮೈದುನಂದಿರು.
     ವೇಗ ಕಡಮೆ ಮಾಡಿದ ಟಾಂಗವನ್ನು ಹಿಡಿದು ನಿಲ್ಲಿಸುತ್ತಾರೆ, ಗೋವಿಂದ ಮತ್ತು ಪದ್ಮನಾಭ. ಹಿರಿಯವನೊಂದು ಮಗ್ಗುಲಲ್ಲಿ, ಕಿರಿಯವನೊಂದು ಮಗ್ಗುಲಲ್ಲಿ.
     ಅವರು ಅರಚುತ್ತಾರೆ :
     "ಇಳಿ  ಕೆಳಗೆ !"
     ಅಷ್ಟರಲ್ಲಿ ತನ್ನ ಎಡಬಲಗಳಲ್ಲೀ ಕಾಣಿಸಿಕೊಳ್ಳುತ್ತಾರೆ, ಇಬ್ಬರು ಹುಡುಗಿಯರು.
     "ಇಳಿಯೇ ಕೆಳಗೆ !" 
     "ಕೆಳಗೆ ಇಳಿಯೇ !"
     ಒಬ್ಬಳು ಬಂಗಾರದ ಆಭರಣಗಳನ್ನು ಧರಿಸಿದ್ದ ಧಡೂತಿ ವ್ಯಕ್ತಿ. ಇನ್ನೊಬ್ಬಳು ಲಂಗ ತೊಟ್ಟ ದೊರೆಸಾನಿ.
     ಈಕೆಗನ್ನಿಸುತ್ತಿದೆ : ಯಾಕೆ ಇಳಿಯಲಿ ನಾನು ? ಇದು ನನ್ನ ಟಾಂಗಾ, ಇಳಿಯಲಾರೆ, ಇಳಿಯಲಾರೆ.
     ಬಾಯಿ ತೆರೆದು ಹಾಗೆ ಹೇಳೋಣವೆಂದರೆ ಗಂಟಲಿನಿಂದ ಧ್ವನಿ ಹೊರಡುತ್ತಿಲ್ಲ.
     ಒಬ್ಬಳು ತನ್ನ ಬಲಗೈಯನ್ನು, ಇನ್ನೊಬ್ಬಳು ತನ್ನ ಎಡಗಾಲನ್ನು ಹಿಡಿದು ಎಳೆಯುತ್ತಿದ್ದಾರೆ.
     " ಇಳಿ ಕೆಳಕ್ಕೆ !"
     ತಾನು ಟಾಂಗಾದಿಂದ ಕದಲಬಾರದು. ಆದರೆ, ಜಗ್ಗುತ್ತಿರುವರಲ್ಲ ? ಶ್ರೀಪಾದ ಬಿದ್ದರೆ ? ಅಯ್ಯೋ—ಶ್ರೀಪಾದ ಬಿದ್ದ !
     ಉರುಳಿದ ಶ್ರೀಪಾದ ಚೀರಿದ...
     .....ಭಾಗೀರಥಿ ಗಡಬಡಿಸಿ ಎದ್ದಳು. ಮಗ್ಗುಲಲ್ಲಿ ಮಲಗಿದ್ದ ಶ್ರೀಪಾದ ಎಚ್ಚರಗೊಂಡು ಧ್ವನಿತೆಗೆದು ಅಳತೊಡಗಿದ್ದ.

\