ಪುಟ:ನೋವು.pdf/೨೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ನೋವು

" ನಮ್ಮ ತಪ್ಪೇನಿದ್ದರೂ ಉಡೀಲಿ ಹಾಕ್ಕೊಳ್ಳಿ," ಎಂದರು. ಕಂಬನಿ ಒಣಗಿದ್ದ ಎರಡು ಕಣ್ಣುಗಳು ಅವರನ್ನೇ ನೋಡಿದುವು.

" ಬದಲಿ ಸರ ಮಾಡಿಸ್ಕೊಡ್ತೀನೀಂತ ಮಾತು ಕೊಟ್ಟಿದಾರಂತೆ."
" ಹೌದು. ಹಾಗೇಂತ ನಾನೇ ಶೀನೆನಿಗೆ ಹೇಳ್ದೆ."

"ನಿಮ್ಮಂಥ ದೊಡ್ಡವರ ಮನೇಲೂ ಹಾವುಗಳು ಸೇರ್ಕೋತಾವಲ್ಲ. ಆಶ್ಚರ್ಯ!" " ಇರಲಿ, ಬಿಡಿ. ಬನ್ನಿ... ಅಥವಾ ಇಲ್ಲಿಗೇ ತರಲೊ ?” "ತನ್ನಿ, ಅದೇ ವಾಸೀಂತ ಕಾಣುತ್ತೆ."

ದೊಡ್ಡಮ್ಮ ಕಾಫಿ ತಿಂಡಿ ತಾವೇ ತರಲೆಂದು ಒಳಕ್ಕೆ ಹೋದರು. ಹೋಗುತ್ತ ನೀಳವಾದ ಉಸಿರೊಂದು ಅವರಿಂದ ಹೊರಬಿತ್ತು.

ಭಾಗೀರಥಿ ಸರ ಕದ್ದಿರಬಹುದೆಂಬುದು ಅವರ ಊಹೆಗೆ ನಿಲುಕದ ವಿಷಯ. ಬಾರಿ ಬಾರಿಗೂ ಎರಡು ಪದಗಳು ಅವರ ನಾಲಿಗೆಯ ಮೇಲೆ ಕುಣಿದುವು : ' ಅವಳು ಅಂಥವಳಲ್ಲ'; ' ಅವಳು ಅಂಥವಳಲ್ಲ.' ಜಲಜೆಯ ಮೇಲೆ ಮಾತ್ರ ಅವರಿಗೆ ತುಸು ಶಂಕೆ.ಏನೇನೋ ಆಸೆಗಳಿರುವ ಹುಡುಗಿ. ಆದರೆ ವಿಷ್ಣುಮೂರ್ತಿ ಅವಳ ಸಂಸಾರಕ್ಕೆ ಅನ್ನದ ದಾರಿ ತೋರಿಸಿರುವ ಮನುಷ್ಯ. ಆತನ ಮನೆಯ ಒಡವೆಯನ್ನು ಆಕೆ ಕದಿಯುವುದುಂಟೆ ? ಯಾರಿಗೆ ಗೊತು? ಸ್ವರ್ಣದ ಮೇಲಿನ ಮೋಹ ಇಂಥದನ್ನು ಮಾಡಿಸೀತು, ಇಂಥ ದನ್ನು ಮಾಡಿಸಲಾರದು ಎಂದು ಕರಾರುವಾಕ್ಕಾಗಿ ಹೇಳುವುದಾದರೂ ಹೇಗೆ ? ಏನಿದ್ದರೂ ತನಿಖೆ ಆ ಮನೆಯಲ್ಲಿ ಎಂದೂ ನಡೆಯದು. ಸಾವಿರ ರೂಪಾಯಿಯೊ, ಅದೆಷ್ಟೊ– ಕೈಯಿಂದ ಹಾಕುವುದೇ ಸರಿ. ಹಣ ವ್ಯಯವಾಗುವುದಲ್ಲಾ ಎಂದು ದೊಡ್ಡಮ್ಮ ಚಿಂತಿಸಲಿಲ್ಲ. ಬದಲು, ಬೀಗತಿಯಾದ ವಳ ವರ್ತನೆಯಿಂದ ಅವರಿಗೆ ಅಪಾರ ನೋವಾಯಿತು. ಇನ್ನು ಇಂಥವಳ ಮಗಳು ಈ ಮನೆಯಲ್ಲಿ ಹೇಗೆ ನಡೆದುಕೊಳ್ಳುವಳೊ ? ಏನು ಬರೆದಿದೆಯೊ ಗೋವಿಂದನ ಹಣೆಯಲ್ಲಿ ? ಕಾಮಾಕ್ಷಿಯ ತಾಯಿಗೆ ತಿಂಡಿತೀರ್ಥಗಳ ಸರಬರಾಜು ಮಾಡಿ ದೊಡ್ಡಮ್ಮ ಪದ್ಮನಾಭನ ಕೊಠಡಿಯತ್ತ ಹೋದರು. ಎಲ್ಲರೂ ಒಟ್ಟಾಗಿ ಬಿದ್ದು ಬಿದ್ದು ನಗುವ ಸದ್ದು ಅಲ್ಲಿಂದ ಕೇಳಿಸು ತಿತ್ತು. ಬಾಗಿಲಲ್ಲಿ ನಿಂತು ದೊಡ್ಡಮ್ಮ ಒಳಕ್ಕೆ ನೋಡಿದರು. ಹಾಸಿಗೆಗಳು ತೆರೆದೇ ಇದ್ದುವು. ಎಲ್ಲಾ ಚೆಲ್ಲಾಪಿಲ್ಲಿ. ಅವುಗಳ ಮೇಲೆ ವೃತ್ತಾಕಾರವಾಗಿ ಕುಳಿತಿತ್ತು ಮೋಹನರಾಯರ ಸಂಸಾರ. ಪದ್ಮನಾಭ ಇರಲಿಲ್ಲ. ದೊಡ್ಡಮ್ಮ ಬಾಗಿಲಲ್ಲಿ ನಿಂತುದನ್ನು ಮೊದಲು ಕಂಡ ಆರತಿ ತನ್ನ ತಾಯಿಗೆ ಸನ್ನೆ ಮಾಡಿದಳು. ಉಳಿದವರ ದೃಷ್ಟಿಗಳೂ ದೊಡ್ಡಮ್ಮನತ್ತ ತಿರುಗಿದುವು. ನಗೆಯ ಅವಶೇಷವನ್ನು ಹೊರಸೂಸುತ್ತಿದ್ದ ಅರೆತೆರೆದ ಬಾಯಿಗಳು. ಆರತಿ ಎದ್ದು ನಿಲ್ಲಲಿಲ್ಲ. ಉಳಿದವರೂ ಕುಳಿತಲ್ಲಿಂದ ಕದಲಲಿಲ್ಲ. ಯಾರೋ ಅಪರಿಚಿತರ ಮನೆಗೆ ದಾರಿತಪ್ಪಿ ಕಾಲಿಟ್ಟಂತಾಯಿತು ದೊಡ್ಡಮ್ಮನ ಪರಿಸ್ಥಿತಿ. "ಖುಷೀಲಿದೀರಿ ಸಂತೋಷ. ಸುಮ್ನೆ ಬಂದೆ. ಹೊರಡ್ತೀನಿ," ಎಂದರು ದೊಡ್ಡಮ್ಮ. ಯಾರೂ ಬೇಡವೆನ್ನಲಿಲ್ಲ.